ಬೆಂಗಳೂರು : ಇಂದು 18 ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿದ್ದು ಪ್ರಧಾನಿ ಮೋದಿ ಅವರು ನೂತನ ಸಂಸತ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೋದಿ ಅವರಿಗೆ ಹಂಗಾಮಿ ಸ್ಪೀಕರ್ ಭರ್ತೃಹರಿ ಮಹ್ತಾಬ್ ಪ್ರಮಾಣ ವಚನ ಬೋಧಿಸಿದ್ದಾರೆ. ನಂತರ ಉಳಿದ ಸಂಸದರು ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ವೇಳೆ ಮಂಡ್ಯ ಸಂಸದ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬೆಂಗಳೂರು ಉತ್ತರ ಸಂಸದೆ, ಸಚಿವೆ ಶೋಭಾ ಕರಂದ್ಲಾಜೆ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಎಲ್ಲರ ಗಮನ ಸೆಳೆದರು.

ಈ ಬಗ್ಗೆ ಎಚ್‌ಡಿಕೆ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಮ್ಮೆಯಿಂದ ಬರೆದು ಕೊಂಡಿದ್ದಾರೆ.18ನೇ ಲೋಕಸಭೆಯ ಸದಸ್ಯನಾಗಿ, ಮಂಡ್ಯ ಮಹಾಜನತೆಯ ಪ್ರತಿನಿಧಿಯಾಗಿ ಗೌರವಾನ್ವಿತ ಹಂಗಾಮಿ ಸಭಾಧ್ಯಕ್ಷರಾದ ಶ್ರೀ ಭರ್ತೃಹರಿ ಮಹತಾಬ್‌ ಅವರ ಸಮಕ್ಷಮದಲ್ಲಿ ನನ್ನ ಮಾತೃಭಾಷೆಯಾದ ಕನ್ನಡಲ್ಲಿ ಪ್ರಮಾಣ ಸ್ವೀಕರಿಸಿದೆ. ಇದು ನನ್ನ ಬದುಕಿನ ಅವಿಸ್ಮರಣೀಯ, ಹೆಮ್ಮೆಯ ಕ್ಷಣ ಎಂದಿದ್ದಾರೆ.

ಭಾರತದ ಪ್ರಜಾಪ್ರಭುತ್ವ ದೇಗುಲದಲ್ಲಿ ಈ ಧನ್ಯತೆಯ ಕ್ಷಣಕ್ಕೆ ಕಾರಣೀಭೂತರಾದ ಮಂಡ್ಯ ಲೋಕಸಭೆ ಕ್ಷೇತ್ರದ ಎಲ್ಲಾ ತಂದೆ ತಾಯಂದಿರು, ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಹಾಗೂ ಸಮಸ್ತ ಕನ್ನಡಿಗರಿಗೆ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.