ಬೆಂಗಳೂರು: ಧೋತಿ ಉಟ್ಟು ಬಂದ ರೈತನಿಗೆ ಜಿ.ಟಿ ಮಾಲ್ ಪ್ರವೇಶ ನಿರಾಕರಿಸಿ ಅಪಮಾನ ಮಾಡಿತ್ತು. ಪಂಚೆ ತೊಟ್ಟ ಪ್ರಾಯಸ್ತ ವ್ಯಕ್ತಿಗೆ ನೋ ಎಂಟ್ರಿ ಎಂದು ಹೇಳಿತ್ತು. ಆದರೀಗ ರೈತನಿಗೆ ಅಪಮಾನ ಮಾಡಿದ ಜಿ.ಟಿ ಮಾಲ್ಗೆ ಸರ್ಕಾರ ತಕ್ಕಪಾಠ ಕಲಿಸಲು ಮುಂದಾಗಿದೆ.
ರೈತನಿಗೆ ಅಪಮಾನ ಮಾಡಿದ ಜಿ.ಟಿ. ಮಾಲ್ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಂಡಿದೆ. 7 ದಿನಗಳ ಕಾಲ ಮಾಲ್ ಕ್ಲೋಸ್ ಮಾಡಲು ಬಿಬಿಎಂಪಿ ಮುಂದಾಗಿದೆ. ಸರ್ಕಾರ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಸೂಚನೆ ಮೇರೆಗೆ ಜಿ.ಟಿ.ಮಾಲ್ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ. ವಲಯ ಆಯುಕ್ತರ ತಂಡ ಕೆಲವೇ ಹೊತ್ತಲ್ಲಿ ಜಿ.ಟಿ. ಮಾಲ್ ಗೆ ತೆರಳಲಿದ್ದು, ಬಳಿಕ ಜಿ.ಟಿ ಮಾಲ್ ಅನ್ನು ಒಂದು ವಾರಗಳ ಕಾಲ ಲಾಕ್ ಮಾಡಲಿದ್ದಾರೆ.
ಇಂದು ನಡೆದ ಸದನದಲ್ಲೂ ಇದೇ ವಿಚಾರದ ಕುರಿತು ಚರ್ಚೆ ನಡೆದಿದೆ. ಸಚಿವ ಭೈರತಿ ಸುರೇಶ್ ಕೂಡ ಈ ವಿಚಾರವಾಗಿ ಮಾತನಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ಹೇಳಿದ್ದಾರೆ.

