ರಾಮನಗರ: ನಗರದ ವಿವೇಕಾನಂದ ನಗರದ ನರಸಿಂಹಯ್ಯ ಬಡಾವಣೆಯಲ್ಲಿ ಮದ್ಯದ ನಶೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಚನ್ನಪಟ್ಟಣದ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ ಎಫ್‌ಡಿಎ ಯೋಗೀಶ್ ಕುಮಾರ್ (41) ಅವರನ್ನು ಕೊಲೆ ಮಾಡಿದ್ದ ಮೂವರನ್ನು ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಂಪೇಗೌಡನದೊಡ್ಡಿಯ ನವೀನ್ ಅಲಿಯಾಸ್ ಹುಚ್ಚ ನವೀನ್, ಆನಂದ್ ಹಾಗೂ ರಾಯರದೊಡ್ಡಿಯ ರಾಹುಲ್ ಬಂಧಿತರು. ಆರೋಪಿಗಳ ಪೈಕಿ ನವೀನ್ ಯೋಗೇಶ್ ಅವರ ಸ್ನೇಹಿತನಾಗಿದ್ದು, ಉಳಿದವರು ಆತನ ಸಹಚರರಾಗಿದ್ದಾರೆ. ತುಮಕೂರು ಜಿಲ್ಲೆಯ ಕಲ್ಲಹಳ್ಳಿ ಗ್ರಾಮದ ಯೋಗೀಶ್ ಅವರನ್ನು ಆರೋಪಿಗಳು ಮೇ 17ರಂದು ಕೊಲೆ ಮಾಡಿ ಪರಾರಿಯಾಗಿದ್ದರು.
ಸಿಸಿಟಿವಿ ಕ್ಯಾಮೆರಾ ರಿಪೇರಿಗಾಗಿ ನವೀನ್ ಬಂದಿದ್ದಾಗ ಯೋಗೀಶ್ ಪರಿಚಯವಾಗಿತ್ತು. ಅದು ಆತ್ಮೀಯತೆಗೆ ತಿರುಗಿತ್ತು. ಮದ್ಯಸೇವನೆ ಅಭ್ಯಾಸ ಹೊಂದಿದ್ದ ಇಬ್ಬರೂ ಆಗಾಗ ಒಂದೆಡೆ ಸೇರಿ ಮದ್ಯಪಾನ ಮಾಡುತ್ತಿದ್ದರು. ಯೋಗೀಶ್ ಕುಟುಂಬಕ್ಕೂ ನವೀನ್ ಪರಿಚಿತನಾಗಿದ್ದ ಎಂದು ಪೊಲೀಸರು ತಿಳಿಸಿದರು.ಘಟನೆ ದಿನ ರಾತ್ರಿ 8.30ರ ಸುಮಾರಿಗೆ ಯೋಗೇಶ್ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೊರಕ್ಕೆ ಹೋಗಿದ್ದರು. ಪತ್ನಿ ದಿವ್ಯ ಅವರು 9.30ರ ಸುಮಾರಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ್ದ ಯೋಗೇಶ್ ಏನೂ ಮಾತನಾಡಿರಲಿಲ್ಲ. ಪತಿ ಮೂರ್ನಾಲ್ಕು ಜನರ ಕುಳಿತು ಮಾತನಾಡುತ್ತಿರುವುದು ಅವರ ಗಮನಕ್ಕೆ ಬಂದಿತ್ತು. ಅದಾದ ಬಳಿಕ ಕರೆ ಸ್ವೀಕರಿಸಿರಲಿಲ್ಲ ಎಂದು ಹೇಳಿದರು.
ಮಧ್ಯರಾತ್ರಿವರೆಗೆ ಆರೋಪಿಗಳು ಯೋಗೀಶ್ ಜೊತೆ ಮದ್ಯಪಾನ ಮಾಡಿದ್ದರು. ನಂತರ ಯೋಗೀಶ್ ಮತ್ತು ನವೀನ್ ನಡುವೆ ವೈಯಕ್ತಿಕ ವಿಚಾರಗಳ ಕುರಿತು ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿತ್ತು. ಆಗ ನವೀನ್, ಸ್ಥಳದಲ್ಲಿದ್ದ ಕಲ್ಲಿನಿಂದ ಯೋಗೇಶ್ ಮುಖಕ್ಕೆ ಹೊಡೆದಿದ್ದ.
ರಾಹುಲ್ ಮತ್ತು ಆನಂದ್ ಸಹ ಹಲ್ಲೆ ನಡೆಸಿದ್ದರು. ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಯೋಗೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ.

