ಬೆಂಗಳೂರು: ಗಣೇಶನ ಮೆರವಣಿಗೆ ಸಾಗುವ ವೇಳೆ ಪಟಾಕಿ ಬಾಕ್ಸ್ ಸ್ಪೋಟಗೊಂಡು ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರದ ಮುತ್ತೂರಿನಲ್ಲಿ ನಡೆದಿದೆ.

ಈ ಘಟನೆಯಲ್ಲಿ ಓರ್ವ ಪೊಲೀಸ್ ಕಾನ್ಸೆಬಲ್ ಸೇರಿದಂತೆ ಒಟ್ಟು ಐವರು ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರದ ಮುತ್ತೂರು ಗ್ರಾಮದ ನಿವಾಸಿ 15 ವರ್ಷದ ಬಾಲಕ ತನುಷ್ ರಾವ್ ಈ ದುರಂತದಲ್ಲಿ ಮೃತಪಟ್ಟಿರುವ ಬಾಲಕ ಎಂದು ಗುರುತಿಸಲಾಗಿದೆ.

ಗಣೇಶನ ಮೂರ್ತಿಯನ್ನು ಮೆರವಣಿಗೆಯ ಮೂಲಕ ವಿಸರ್ಜನೆಗೆ ಕೊಂಡೊಯ್ಯುವ ವೇಳೆ ಲಿಫ್ಟಿಂಗ್ ವಾಹನದಲ್ಲಿದ್ದ ಪಟಾಕಿ ಬಾಕ್ಸ್ ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎನ್ನಲಾಗಿದೆ. ಗಣೇಶ ಚತುರ್ಥಿಯ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರದ ಮುತ್ತೂರು ಗ್ರಾಮದಲ್ಲಿ ಫ್ರೆಂಡ್ಸ್ ಯುವಕರ ಬಳಗದಿಂದ ಗಣೇಶನ್ನು ಪ್ರತಿಷ್ಠಾಪಿಸಲಾಗಿತ್ತು.

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ಲಿಫ್ಟಿಂಗ್ ವಾಹನದ ಸೈಲೆನ್ಸರ್ ಬಿಸಿಯಿಂದಾಗಿ ಬೆಂಕಿ ಹೊತ್ತಿಕೊಂಡು, ಅದು ಪಟಾಕಿ ಬಾಕ್ಸ್ ಗಳಿಗೆ ತಾಗಿ ಈ ಸ್ಫೋಟ ಸಂಭವಿಸಿರಬಹುದು ಎನ್ನಲಾಗಿದೆ. ಇನ್ನುಳಿದಂತೆ ಗಣೇಶ್, ಯೋಗೇಶ್ , ಮುನಿರಾಜು, ನಾಗರಾಜು, ಚೇತನ್ ಶಾವಿ ಸೇರಿದಂತೆ ಕಾನ್ಸ್ಟೇಬಲ್ ಜಾಕಿ‌ರ್ ಹುಸೇನ್ ಗಾಯಗೊಂಡಿದ್ದಾರೆ, ಎಲ್ಲಾ ಗಾಯಾಳುಗಳನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.