ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಥಣಿಸಂದ್ರದ ಮೋನಾರ್ಚ್ ಅಪಾರ್ಟ್‌ಮೆಂಟ್‌ನಲ್ಲಿ ಮಲೆಯಾಳಿಗರ ಓಣಂ ಹಬ್ಬದ ದಿನ ಮನೆ ಮುಂದೆ ಹಾಕಿದ್ದ ರಂಗೋಲಿ ಅಳಿಸಿಹಾಕಿ ವಿಕೃತಿ ಮೆರೆದಿದ್ದ ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದೇಶ, ವಿದೇಶದ ಎಲ್ಲ ವರ್ಗ ಹಾಗೂ ಎಲ್ಲ ಧರ್ಮ, ಭಾಷೆ, ಜಾತಿಯುಳ್ಳ ಜನರು ವಾಸ ಮಾಡುತ್ತಿದ್ದಾರೆ. ಎಲ್ಲರೂ ಅವರವರದ್ದೇ ಧಾರ್ಮಿಕ ಆಚರಣೆ ಮಾಡಿಕೊಂಡು ಹೋಗುವುದಕ್ಕೆ ಸ್ವತಂತ್ರರಾಗಿದ್ದಾರೆ. ಇದಕ್ಕೆ ಸಂವಿಧಾನದಲ್ಲಿಯೇ ಅವಕಾಶ ನೀಡಿರುವಾಗ ಇಲ್ಲೊಬ್ಬ ಮಹಿಳೆ ಕೇರಳದ ಮೂಲ ನಿವಾಸಿಗಳು ಬೆಂಗಳೂರಿನಲ್ಲಿ ವಾಸವಾಗಿದ್ದು, ಓಣಂ ಆಚರಣೆಗೆ ಮನೆ ಮುಂದೆ ಹಾಕಿಕೊಂಡಿದ್ದ ರಂಗೋಲಿಯಲ್ಲಿ ಕಾಲಿನಿಂದ ತುಳಿದು ಕೆಡಿಸಿದ್ದ ಮಹಿಳೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ರಂಗೋಲಿ ಕೆಡಿಸಿದ ಮಹಿಳೆಯ ವಿರುದ್ಧ ಅಪಾರ್ಟ್‌ಮೆಂಟ್ ನಿವಾಸಿಗಳು ದೂರು ನೀಡಿದ್ದು, ಪೊಲೀಸರು ಆಕೆಯ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.