ಬೆಂಗಳೂರು: ಪಂಚೆ ಧರಿಸಿ ಬಂದದ್ದಕ್ಕೆ ಹಾವೇರಿಯ ರೈತರೊಬ್ಬರಿಗೆ ಮಾಲ್‌ನೊಳಗೆ ಪ್ರವೇಶ ನಿರಾಕರಿಸಿದ ಬೆಂಗಳೂರಿನ ಜಿಟಿ ವರ್ಲ್ಡ್‌ ಮಾಲ್‌ ವಿರುದ್ಧ ದೂರು ದಾಖಲಾಗಿದೆ.

ಮಂಗಳವಾರ ಸಂಜೆ ಘಟನೆ ನಡೆದಿತ್ತು. ಹಾವೇರಿಯ ರೈತ ಫಕೀರಪ್ಪ ಅವರು ಪಂಚೆ ಧರಿಸಿ, ಮಗನ ಸಮೇತ ಸಿನಿಮಾ ನೋಡಲು ಬಂದಿದ್ದರು. ʼಪಂಚೆ ಧರಿಸಿ ಮಾಲ್ ಒಳಗೆ ಬರುವಂತಿಲ್ಲʼ ಎಂದು ಸೆಕ್ಯುರಿಟಿ ತಡೆದಿದ್ದರು. ಇದನ್ನು ರೈತರ ಮಗ ಪ್ರಶ್ನಿಸಿದ್ದರು. ನಂತರ ಈ ವಿರುದ್ಧ ಹಲವರು ಪಂಚೆಯುಟ್ಟು ಬಂದು ಪ್ರತಿಭಟನೆ ನಡೆಸಿದ್ದರು.

ಮಾಲ್‌ ಮುಂದೆ ತೀವ್ರ ಹೋರಾಟ ಹಾಗೂ ಪ್ರತಿಭಟನೆ ನಡೆದಿತ್ತು. ʼವಿಸ್ತಾರ ನ್ಯೂಸ್‌ʼ ಈ ಬಗ್ಗೆ ಕಾರ್ಯಕ್ರಮ ಮಾಡಿದ್ದಲ್ಲದೆ, ಅದೇ ರೈತರನ್ನು ಕರೆದೊಯ್ದು ಮಾಲ್‌ಗೆ ಪ್ರವೇಶ ಕೊಡಿಸಿತ್ತು. ಈ ಸಂದರ್ಭದಲ್ಲಿ ಮಾಲ್‌ನ ಮುಖ್ಯಸ್ಥರು ಸ್ಥಳದಲ್ಲಿ ಹಾಜರಿದ್ದು, ತಮ್ಮ ಸಿಬ್ಬಂದಿಯಿಂದ ಆದ ಅವಮಾನಕ್ಕೆ ಕ್ಷಮೆ ಕೇಳಿದ್ದರು. ರೈತ ಫಕೀರಪ್ಪಗೆ ಹಾರ ಹಾಕಿ ಸನ್ಮಾನ ಮಾಡಿದ್ದರು.

ಇದೀಗ ಜಿಟಿ ಮಾಲ್ ಮಾಲ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೈತ ಫಕೀರಪ್ಪ ಅವರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ಅಡಳಿತ ಮಂಡಳಿ ಹಾಗೂ ಸಿಬ್ಬಂದಿ ಅರುಣ್ ವಿರುದ್ಧ ಕ್ರಮ ಜರಗಿಸುವಂತೆ ಎಫ್ಐಆರ್ ದಾಖಲಾಗಿದೆ.