ಬೆಂಗಳೂರು : RCB ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಕೆಂಡಕಾರಿದ್ದು, ಇಡೀ ಘಟನೆಗೆ ಡಿಕೆಶಿಯೇ ನೇರ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು ಡಿ.ಕೆ.ಶಿವಕುಮಾರ್ ಅವರ ಅಚಾತುರ್ಯ, ಆತುರ ಹಾಗೂ ಅವಿವೇಕಿತನದಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಟೀಕಿಸಿದ್ದಾರೆ.
ದುರಂತಕ್ಕೆ ಕಾರಣನಾದ ಅವಿವೇಕಿ ಡಿಸಿಎಂ ಡಿಕೆಶಿಯನ್ನು ಸಂಪುಟದಿಂದ ಹೊರ ಹಾಕಬೇಕು ಎಂದು ಕುಮಾರಸ್ವಾಮಿ ಒತ್ತಾಯ ಮಾಡಿದರು. ಕರ್ನಾಟಕದಲ್ಲಿ ಇರುವುದು ಕಟುಕರ ಸರ್ಕಾರ. ಸಿಎಂ ಸಿದ್ದರಾಮಯ್ಯ ನಿಷ್ಕ್ರಿಯ ಮುಖ್ಯಮಂತ್ರಿ. ಡಿಸಿಎಂ ಮುಂದೆ ಅವರ ಆಟವೇನೂ ನಡೆಯುತ್ತಿಲ್ಲ. ಇನ್ನು, ಗೃಹ ಸಚಿವರ ಬಗ್ಗೆ ಹೇಳುವುದೇ ಬೇಡ. ಈ ವ್ಯಕ್ತಿ ಕೂರು ಎಂದರೆ ಅವರು ಕೂರುತ್ತಾರೆ, ನಿಲ್ಲು ಎಂದರೆ ನಿಲ್ಲುತ್ತಾರೆ. ಸರ್ಕಾರದ ದುರಾಡಳಿತವೇ ಇದಕ್ಕೆ ಪ್ರಮುಖ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

