ಬೆಂಗಳೂರು : ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಅಲ್ಲ, ಅವ್ರು ರೀಲ್ಸ್ ಮಿನಿಸ್ಟರ್ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಆರ್ಸಿಬಿ ಅಭಿಮಾನಿಗಳ ಸಾವಿನ ಸುದ್ದಿ ತಿಳಿದ ಮೇಲೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಪ್ಗೆ ಮುತ್ತು ಕೊಟ್ಟು ಸಾವಿನಲ್ಲೂ ಸಂಭ್ರಮ ಮಾಡ್ತಾರೆ ಎಂದು ಡಿಕೆಶಿ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ನಿಖಿಲ್, ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸರನ್ನು ಅಮಾನತು ಮಾಡಿದೆ. ಖುದ್ದು ಪೊಲೀಸರೇ ಎರಡೆರಡು ಕಡೆ ಕಾರ್ಯಕ್ರಮ ಬೇಡ ಅಂದರೂ ಸಿಎಂ ಮತ್ತು ಡಿಸಿಎಂ ಕ್ರೆಡಿಟ್ ಪಡೆಯೋಕೆ ಈ ಕಾರ್ಯಕ್ರಮ ಮಾಡಿ ಅನಾಹುತಕ್ಕೆ ಕಾರಣರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ದುರಂತದ ಹಿನ್ನೆಲೆಯಲ್ಲಿ ಅಮಾನತು ಮಾಡಬೇಕಾಗಿದ್ದು, ಪ್ರತಿದಿನ ಬೆಂಗಳೂರು ನಗರವನ್ನು ರಕ್ಷಿಸುವ ಪೊಲೀಸರನ್ನಲ್ಲ, ಯೋಜನೆ ರೂಪಿಸುವಲ್ಲಿ ವಿಫಲರಾದ ನಿಮ ಸರ್ಕಾರದ ಸಚಿವರನ್ನ ಸಚಿವ ಸಂಪುಟದಿಂದ ಅಮಾನತುಗೊಳಿಸಬೇಕಿತ್ತು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕೋಶ ವ್ಯಕ್ತಪಡಿಸಿದ್ದಾರೆ.
ಇವರು ಕ್ರೆಡಿಟ್ ಪಡೆದುಕೊಳ್ಳಲು ಹೋಗಿ ಅಮಾಯಕರ ಜೀವಗಳನ್ನ ಬಲಿ ಪಡೆದಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಜನರಿಗೆ ಅಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕೆಂದು ಹೇಳಿದ್ರು. ಈಗ ಪೊಲೀಸರನ್ನ ಅಮಾನತು ಮಾಡಿರುವುದು ಕೋತಿ ತಾನು ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತಾಗಿದೆ ಎಂದು ನಿಖಿಲ್ ವ್ಯಂಗ್ಯವಾಡಿದ್ದಾರೆ.

