ಬೆಂಗಳೂರು: ಧ್ರುವ ಸರ್ಜಾ ನಟನೆಯ ಕನ್ನಡ ಚಿತ್ರ ‘ಮಾರ್ಟಿನ್’ ಶುಕ್ರವಾರ ಬಿಡುಗಡೆಯಾಗಿತ್ತು. ಆದರೆ ಕರ್ನಾಟಕ ಮಾತ್ರವಲ್ಲದೇ ತೆಲುಗು ರಾಜ್ಯಗಳ ಕೆಲ ಥಿಯೇಟರ್‌ಗಳಲ್ಲಿ ಬೆಳಗ್ಗಿನ ಪ್ರದರ್ಶನಗಳು ರದ್ದಾಗಿತ್ತು. ಇದರಿಂದ ಅಭಿಮಾನಿಗಳು ನಿರಾಶೆ ವ್ಯಕ್ತಪಡಿಸಿದ್ದಾರೆ.

ಹಲವು ಥಿಯೇಟರ್‌ಗಳಲ್ಲಿ ಸಿನಿಮಾ ರದ್ದಾಗಿರುವ ಕುರಿತಂತೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ ದೂರುಗಳನ್ನು ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಬೆಳಗಿನ ಪ್ರದರ್ಶನಗಳಿಗಾಗಿ ತಮ್ಮ ಟಿಕೆಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿರುವ ಒಬ್ಬರು ಬಳಕೆದಾರರು, ಬೆಳಗ್ಗೆ 7 ಗಂಟೆ ಹಾಗೂ ಬೆಳಗ್ಗೆ 8:45 ರ ಎರಡೂ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಇನ್ನೊಬ್ಬ ಬಳಕೆದಾರರು ಡಿಆರ್‌ಸಿ ಗರುಡಾ ಮಾಲ್‌ನಲ್ಲಿ ಬೆಳಗ್ಗೆ 9 ಗಂಟೆಯ ಸ್ಕ್ರೀನಿಂಗ್‌ ಅನ್ನು ರದ್ದುಗೊಳಿಸಲಾಗಿದೆ ಎಂದು ದೂರಿದ್ದಾರೆ.

ಹಲವು ಥಿಯೇಟರ್‌ಗಳಲ್ಲಿ ಮಾರ್ಟಿನ್‌ ಸಿನಿಮಾ ಪ್ರದರ್ಶನ್‌ ಕಾಣದೇ ಹೋಗಿರುವುದಕ್ಕೆ ಸಂಬಂಧಿಸಿದಂತೆ ಚಿತ್ರದ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ ಕೆಲವು ಬಳಕೆದಾರರು, ವಿತರಕರು ಮತ್ತು ನಿರ್ಮಾಪಕರ ನಡುವಿನ ಹಣಕಾಸಿನ ಸಮಸ್ಯೆಗಳಿಂದ ಸಿನಿಮಾ ರದ್ದಾಗಿರಬಹುದು ಎಂದು ಊಹಿಸಿದ್ದಾರೆ. ಥಿಯೇಟರ್‌ಗಳು ಸಂಪೂರ್ಣವಾಗಿ ಬುಕ್ ಆಗಿದ್ದರೂ, ಪ್ರದರ್ಶನಗಳನ್ನು ಇನ್ನೂ ರದ್ದುಗೊಳಿಸಲಾಗುತ್ತಿದೆ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.