ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಓವಿ ಟ್ರ್ಯಾಪ್ ಅಳವಡಿಕೆಗೆ ಮುಂದಾಗಿದೆ.
ಓವಿ ಟ್ರ್ಯಾಪ್ ಅಳವಡಿಕೆಗೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಚಾಲನೆ ನೀಡಿದರು. ಓವಿ ಟ್ರ್ಯಾಪ್ ಸಾಧನವು ಸೊಳ್ಳೆಗಳು, ಸೊಳ್ಳೆಗಳ ಮೊಟ್ಟೆ ನಾಶಪಡಿಸಲಿದೆ.
ಇದೊಂದು ಮಡಿಕೆ ಆಕಾರದ ಸಾಧನವಾಗಿದೆ. ಕುಂಡದಲ್ಲಿ ನೀರು ತುಂಬಿ ರಾಸಾಯನಿಕ ಹಾಕಲಾಗುತ್ತೆ. ರಾಸಾಯನಿಕ ಮಿಶ್ರಣ ಸೊಳ್ಳೆಗಳನ್ನ ಆಕರ್ಷಿಸಿ ಸಾಯಿಸುತ್ತೆ. ಒಂದು ಬಯೋ ಟ್ರ್ಯಾಪ್ ಸಾಧನ 30 ದಿನ ಕೆಲಸ ಮಾಡಲಿದೆ. ಬಯೋ ಟ್ರ್ಯಾಪ್ ಬಳಕೆಯಿಂದ ಶೇ.60 ರಷ್ಟು ಸೊಳ್ಳೆಗಳ ನಿಯಂತ್ರಣ ಸಾಧ್ಯ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿ ಡೆಂಘೀ, ಮಲೇರಿಯಾ ಕಂಟ್ರೋಲ್ ಮಾಡಲಾಗ್ತಿದೆ. ನಗರದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಓವಿ ಟ್ರ್ಯಾಪ್ ಅಳವಡಿಸಿದ್ದೇವೆ. ಪ್ರಾಯೋಗಿಕವಾಗಿ ಈ ಸಾಧನ ಅಳವಡಿಸಲಾಗ್ತಿದೆ. ಇದರಿಂದ ಸೊಳ್ಳೆಗಳ ನಿಯಂತ್ರಣ ಜೊತೆಗೆ ಎಷ್ಟಿದೆ ಅಂತಾ ಗೊತ್ತಾಗುತ್ತೆ. ಮುಂಬೈನ ಧಾರವಿ ಕೊಳಗೇರಿ ಪ್ರದೇಶದಲ್ಲೂ ಪ್ರಯೋಗ ನಡೀತಿದೆ. ಅದೇ ರೀತಿ ಬೆಂಗಳೂರಲ್ಲೂ ಕಂಟ್ರೋಲ್ ಮಾಡಲು ಹೊರಟಿದ್ದೇವೆ. ಸೊಳ್ಳೆಗಳ ನಿಯಂತ್ರಣದಿಂದ ವೈರಸ್ಗಳ ಕಂಟ್ರೋಲ್ಗೆ ಸಹಕಾರಿ ಆಗಲಿದೆ ಎಂದರು.
ರಾಜ್ಯದಲ್ಲಿ ನಿನ್ನೆ ಹೊಸದಾಗಿ 196 ಡೆಂಗ್ಯೂ ಕೇಸ್ಗಳು ದೃಢಪಪಟ್ಟಿದ್ದವು. ಈ ಮೂಲಕ 1,229 ಡೆಂಗ್ಯೂ ಕೇಸ್ಗಳು ಸಕ್ರಿಯವಾಗಿವೆ. ಡೆಂಗ್ಯೂ ದೃಢಪಟ್ಟವರಲ್ಲಿ 206 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು 10 ಸಾವಿರ ಗಡಿ ದಾಟಿದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಮೊನ್ನೆಯಷ್ಟೇ 199 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, 1182 ಕೇಸ್ಗಳು ಸಕ್ರಿಯವಾಗಿದ್ದವು. ಸತತವಾಗಿ ಸುರಿದ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ ಎಂದು ಕೆಲ ತಜ್ಞರು ಅಂದಾಜಿಸಿದ್ದಾರೆ.

