ಬೆಂಗಳೂರು: ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶಿಸಿದ್ದು, ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕರು ಸಹಮತ ಸೂಚಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಸದ್ಯಕ್ಕೆ ತಮಿಳುನಾಡಿಗೆ ನೀರು ಹರಿಸುವುದು ಬೇಡ ಎಂದು ಒತ್ತಾಯಿಸಿದ್ದಾರೆ. ಆದರೆ ಕಾನೂನಾತ್ಮಕವಾಗಿ ಹೋರಾಟ ಮಾಡಲು ಅಂತಿಮವಾಗಿ 11,000 ಕ್ಯೂಸೆಕ್​ ಬದಲಿಗೆ 8 ಸಾವಿರ ಕ್ಯುಸೆಕ್ ನೀರು ಬಿಡಲು ನಿರ್ಧಾರ ಮಾಡಲಾಗಿದೆ.

ಸರ್ವಪಕ್ಷಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ನಿತ್ಯ 11,000 ಕ್ಯೂಸೆಕ್‌ ನೀರು ಬದಲು 8000 ಕ್ಯೂಸೆಕ್‌ ಬಿಡುಗಡೆ ಮಾಡಿ ಕಾನೂನು ಹೋರಾಟ ಮಾಡುತ್ತೇವೆ. CWRC ಶಿಫಾರಸು ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸುತ್ತೇವೆ.

ಮಳೆ ಕಡಿಮೆಯಾದರೆ 8000 ಕ್ಯೂಸೆಕ್‌ಗಿಂತ ಕಡಿಮೆ ಬಿಡುತ್ತೇವೆ. ಒಂದು ವೇಳೆ ಮಳೆ ಹೆಚ್ಚಾದರೆ CWRC ಶಿಫಾರಸಿನಂತೆ ನೀರು ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಸಭೆಯಲ್ಲಿ ವಸ್ತು ಸ್ಥಿತಿ ಬಗ್ಗೆ ಚರ್ಚೆಯಾಗಿದೆ. ಜುಲೈ 11ರಂದು ನಡೆದ ಸಿಡಬ್ಲ್ಯುಆರ್‌ಸಿ ಸಭೆಯಲ್ಲಿ ಜುಲೈ 12ರಿಂದ 31ರವರೆಗೆ ತಮಿಳುನಾಡಿಗೆ ಪ್ರತಿ ನಿತ್ಯ 1TMC ನೀರನ್ನು ಬಿಡಲು ಆದೇಶ ಮಾಡಲಾಗಿತ್ತು.

ಜೂನ್ ತಿಂಗಳಲ್ಲಿ 9.14 ಟಿಎಂಸಿ ನೀರು ಬಿಡಬೇಕಿತ್ತು. 31.24 ಜುಲೈ ತಿಂಗಳಲ್ಲಿ ಬಿಡಬೇಕು. ಒಟ್ಟಾರೆ ಸುಮಾರು 40.43 ಟಿಎಂಸಿ ನೀರು ಬಿಡಬೇಕು. ನಾವು ಈವರೆಗೂ 5 ಟಿಎಂಸಿವರೆಗೂ ನೀರು ಬಿಟ್ಟಿದ್ದೇವೆ ಎಂದು ತಿಳಿಸಿದರು.