ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ಸುತ್ತಮುತ್ತ ಅಪರಿಚಿತ ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಸಹೋರರ ಕುಟುಂಬದ ವಿರುದ್ದ ಯಾವುದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡದಂತೆ ನಗರದ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಕುಟುಂಬದವರ ವಿರುದ್ಧ ಯಾವುದೇ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ಮುಖ್ಯವಾಗಿ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌, ಯೂಟ್ಯೂಬರ್‌ ಎಂಡಿ ಸಮೀರ್‌ ಸೇರಿದಂತೆ ಮಾಧ್ಯಮದವರನ್ನು ನಿರ್ದೇಶಿಸಿ ನಿರ್ಬಂಧಕಾಜ್ಞೆ ಹೊರಡಿಸಬೇಕೆಂದು ಕೋರಿ ಡಿ. ಹರ್ಷೇಂದ್ರ ಕುಮಾರ್‌ ಅವರು ಅಸಲು ದಾವೆ ದಾಖಲಿಸಿದ್ದಾರೆ.

ಇಂದು ಈ ಅರ್ಜಿಯ ವಿಚಾರಣೆ ನಡೆಸಿದ 11 ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ನಿರ್ಬಂಧಕಾಜ್ಞೆ ವಿಧಿಸಿ ಮಧ್ಯಂತರ ಆದೇಶ ಹೊರಡಿಸಿದೆ. ಇತ್ತೀಚೆಗೆ ಧರ್ಮಸ್ಥಳದ ಮಾಜಿ ನೈರ್ಮಲ್ಯ ಸಿಬ್ಬಂದಿಯೊಬ್ಬರು ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಮೃತದೇಹಗಳನ್ನು ಹೂತಿರುವುದಾಗಿ ಹೇಳಿಕೆ ದಾಖಲಿಸಿದ ಬೆನ್ನಲ್ಲೇ ಧರ್ಮಸ್ಥಳ ಪ್ರಕರಣ ತೀವ್ರ ಚರ್ಚೆಗೆ ಕಾರಣವಾಗಿದೆ.

ಇನ್ನು ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರೋ ಹೇಳಿದರು ಅಂದ ಕಾರಣಕ್ಕೆ ದಿಢೀರ್ ಎಸ್ ಐ ಟಿ ರಚನೆ ಮಾಡಲು ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶುಕ್ರವಾರ ಮೈಸೂರಿನಲ್ಲಿ ಧರ್ಮಸ್ಥಳದ ಸಾಮೂಹಿಕ ಹತ್ಯೆ ಪ್ರಕರಣದ ಕುರಿತು ಅವರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದರು.

ಎತ್ತು ಮರಿ ಹಾಕಿತ್ತು ಅಂಥ ಕೊಟ್ಟಿಗೆ ರೆಡಿ ಮಾಡಲು ಸಾಧ್ಯವಿಲ್ಲ. ಇದು ಅದೇ ರೀತಿ ಒಬ್ಬ ವ್ಯಕ್ತಿ ಬಂದು ಸ್ವ ಇಚ್ಚಾ ಹೇಳಿಕೆ ಕೊಟ್ಟಿದ್ದಾನೆ. ನಾನು ಧರ್ಮಸ್ಥಳದಲ್ಲಿ ಎಷ್ಟೋ ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದಾನೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಪೊಲೀಸರು ಏನು ವರದಿ ಕೊಡುತ್ತಾರೋ ನೋಡೊಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪೊಲೀಸರು ನೀಡುವ ವರದಿ ಆಧಾರದ ಮೇಲೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಈಗಲೇ ಯಾರೋ ಹೇಳಿದರು ಎಂದು ಏನೇನೊ ಘೋಷಣೆ ಮಾಡಲು ಸಾಧ್ಯವಿಲ್ಲ. ಧರ್ಮಸ್ಥಳದ ಪ್ರಕರಣದಲ್ಲಿ ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ ಎಂದು ನುಡಿದ ಸಿಎಂ ಸಿದ್ದರಾಮಯ್ಯ, ಒತ್ತಡ ಬಂದರೂ ನಾವು ಅದಕ್ಕೆ ಬಗ್ಗುವುದಿಲ್ಲ ಎಂದರು.