ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಪವನ್ (ಎ3) ಪರ ವಕೀಲರಿಗೆ ಸಾಕ್ಷ್ಯ ತಿದ್ದಿದ ಆರೋಪದ ಮೇರೆಗೆ 5,000 ರೂ. ದಂಡ ವಿಧಿಸಲಾಗಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣ ವಿಚಾರಣೆ ಮುಂದುವರಿದಿದ್ದು, 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಆರೋಪಿಗಳ ಪರ ವಕೀಲರು ವಾದ ಮಂಡನೆ ನಡೆಸುತ್ತಿದ್ದಾರೆ. ಕಳೆದ ವಿಚಾರಣೆಯಲ್ಲಿ ಆರೋಪಿಗಳಲ್ಲಿ ಒಬ್ಬರಾದ ಪವನ್ (ಎ3) ಪರ ವಕೀಲರು ತನಿಖಾಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ತನಿಖಾಧಿಕಾರಿಗಳಲ್ಲಿ ಒಬ್ಬರಾದ ಚಂದನ್ ಅವರನ್ನು ಸಹ ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸಬೇಕು ಎಂದು ವಾದಿಸಿದ್ದರು.

ಆರೋಪಿಗಳ ಮೊಬೈಲ್ ಗಳನ್ನು ವಶಕ್ಕೆ ಪಡೆಯುವಾಗ ಪೊಲೀಸರು ಫೋಟೋ ತೆಗೆದಿದ್ದರು. ಆ ಫೋಟೊನಲ್ಲಿರುವ ಟೈಲ್ಸ್​​ನ ಬಣ್ಣವನ್ನು ಉಲ್ಲೇಖಿಸಿ, ತನಿಖಾಧಿಕಾರಿಗಳ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿ, ಸಾಕ್ಷ್ಯ ತಿದ್ದಿದ ಆರೋಪಗಳನ್ನು ಪವನ್ ಪರ ವಕೀಲರು ಮಾಡಿದ್ದರು. ಆದರೆ ನ್ಯಾಯಾಲಯ ಈ ವಾದವನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ, ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ಕಾರಣಕ್ಕೆ 5000 ರೂ. ದಂಡ ವಿಧಿಸಿದೆ. ಈ ಮೊತ್ತವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಲು ಸೂಚಿಸಲಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರ ಅರ್ಜಿಗೆ ಕೋರ್ಟ್ ಅಸ್ತು ಎಂದಿದೆ. ಜೈಲಿನ ಒಳ ಸಂದರ್ಶನಕ್ಕೆ ಒಪ್ಪಿಗೆ ಸೂಚಿಸಿ ಕೋರ್ಟ್ ಆದೇಶ ಕೊಟ್ಟಿದೆ.

ಜೈಲ್ ಸೂಪರಿಂಟೆಂಡೆಂಟ್‌ಗೆ ಅಧಿಕಾರ ನೀಡಿರುವ ಕೋರ್ಟ್ ಜೈಲ್ ಮ್ಯಾನ್ಯುಯಲ್ ಪ್ರಕಾರ, ಒಳಸಂದರ್ಶನಕ್ಕೆ ಅವಕಾಶ ನೀಡಿ ಆದೇಶ ಕೊಟ್ಟಿದೆ. ಸೂಪರಿಂಟೆಂಡೆಂಟ್ ಮನವಿ ಮಾಡಿ ಒಪ್ಪಿಗೆ ಸೂಚಿಸಿದರೆ ಒಳಸಂದರ್ಶನಕ್ಕೆ ಅವಕಾಶ ಎಂದು ಆದೇಶದಲ್ಲಿ ತಿಳಿಸಿದೆ. ಒಂದು ವೇಳೆ ಸೂಪರಿಂಟೆಂಡೆಂಟ್ ಒಪ್ಪದೆ ಇದ್ದರೆ ಅವಕಾಶ ಇಲ್ಲ ಎಂದು 57 ನೇ ಸೆಷನ್ಸ್ ಕೋರ್ಟ್ ನಿಂದ ಆದೇಶ ಹೊರಬಿದ್ದಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಬಳಿ ಮೊಬೈಲ್ ವಶಕ್ಕೆ ಪಡೆಯುವಾಗ ಕರ್ತವ್ಯ ಲೋಪ ಆರೋಪ ಕೂಡ ಕೇಳಿ ಬಂದಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮೊಬೈಲ್ ವಶಕ್ಕೆ ಪಡೆದಿಲ್ಲ, ಬೇರೆ ಕಡೆ ವಶಕ್ಕೆ ಪಡೆದು ಸಾಕ್ಷಿ ನಾಶ ಮಾಡಿದ್ದಾರೆ ಎಂದು ಅರ್ಜಿ ಸಲ್ಲಿಸಲಾಗಿತ್ತು. ಸಾಕ್ಷಿ ಅಷ್ಟೇ ‌ಮುಖ್ಯ ಎಂದು ಕೋರ್ಟ್ ಅರ್ಜಿ ವಜಾಗೊಳಿಸಿದೆ.