ಬೆಂಗಳೂರು:  ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ದರ್ಶನ್​ಗೆ ರಾಜಾತಿಥ್ಯ ನೀಡಿರುವುದು ಸಾಬೀತಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದರು. ಅದರಂತೆ ಈಗ ದರ್ಶನ್‌ ಅವರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವುದು ಖಚಿತ ಆಗಿದೆ. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್​ ಮಾಡಲು ನ್ಯಾಯಾಲಯದ ಅನುಮತಿ ಸಿಕ್ಕಿದೆ. ಈ ಬಗ್ಗೆ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.

ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಲಿದ್ದು, ಪವನ್ , ರಾಘವೇಂದ್ರ, ನಂದೀಶ್ ಮೈಸೂರು ಜೈಲಿಗೆ ಶಿಫ್ಟ್​ ಆಗಬೇಕಿದೆ. ಜಗದೀಶ್​ಗೆ ಶಿವಮೊಗ್ಗ ಜೈಲು, ಧನರಾಜ್​ಗೆ ಧಾರವಾಡ ಜೈಲು ಗತಿಯಾಗಿದೆ. ವಿಜಯಪುರ ಜೈಲಿಗೆ ವಿನಯ್​ ಸ್ಥಳಾಂತರ ಆಗಬೇಕಿದೆ. ನಾಗರಾಜ್​ ಕಲಬುರಗಿ ಜೈಲು, ಲಕ್ಷ್ಮಣ ಶಿವಮೊಗ್ಗ ಜೈಲು, ಪ್ರದೂಶ್ ಬೆಳಗಾವಿ ಜೈಲಿಗೆ ಶಿಫ್ಟ್​ ಆಗಲಿದ್ದಾರೆ.