ಬೆಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 40 ಕೋಟಿ ಮೌಲ್ಯದ 4 ಕೆ.ಜಿಗೂ ಹೆಚ್ಚು ಕೊಕೇನ್ ಅನ್ನು ಡಿಆರ್‌ಐ ಅಧಿಕಾರಿಗಳು ಸೀಜ್‌ ಮಾಡಿದ್ದು, ಪ್ರಯಾಣಿಕನೊಬ್ಬನನ್ನು ಬಂಧಿಸಿದ್ದಾರೆ.

ಭಾರತೀಯ ಮೂಲದ ಪ್ರಯಾಣಿಕ ನಿನ್ನೆ (ಜುಲೈ 18) ದೋಹಾದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ್ದ. ಈತನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಬೆಂಗಳೂರು ವಲಯ ಘಟಕವು ತಡೆಹಿಡಿದಿದೆ ಎಂದು ಹಣಕಾಸು ಸಚಿವಾಲಯವು ಇಂದು ತಿಳಿಸಿದೆ.

ಡಿಆರ್‌ಐ ಅಧಿಕಾರಿಗಳು ಪ್ರಯಾಣಿಕನ ಬ್ಯಾಗೇಜ್ ತಪಾಸಣೆ ನಡೆಸಿದ ವೇಳೆ ಬಳಕೆ ಮಾಡದ ಎರಡು ಸೂಪರ್ ಹೀರೋ ಕಾಮಿಕ್ಸ್/ಮ್ಯಾಗಜೀನ್ಸ್ ಪತ್ತೆಯಾಗಿದೆ. ಈ ಮ್ಯಾಗಜೀನ್ ಕವರ್ ಮೇಲೆ ಸೀಲ್ ಮಾಡಿದ ರೀತಿಯಲ್ಲಿ ಕೊಕೇನ್ ಪೌಡರ್ ಪತ್ತೆಯಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಈ ಬಿಳಿ ಬಣ್ಣದ ಪೌಡರ್ ಅನ್ನು ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಿದ್ದು, ಕೊಕೇನ್ ಎಂಬುದು ದೃಢವಾಗಿದೆ.

ಸದ್ಯ 4,006 ಗ್ರಾಂ (4 ಕೆ.ಜಿಗಿಂತ ಹೆಚ್ಚು) ತೂಕದ ಮತ್ತು ಸುಮಾರು 40 ಕೋಟಿ ರೂ. ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯದ ಕೊಕೇನ್ ಅನ್ನು NDPS ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಯಾಣಿಕನನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಮುಂಬೈ ಏರ್‌ಪೋರ್ಟ್‌ ಮಹಿಳೆ ಅರೆಸ್ಟ್:‌ ಬಿಸ್ಕೆಟ್ ಹಾಗೂ ಚಾಕ್ಲೀಟ್ ಬಾಕ್ಸ್‌ಗಳೊಂದಿಗೆ ಮುಂಬೈ ಏರ್‌ಪೋರ್ಟ್‌ಗೆ ಬಂದಿಳಿದ ಭಾರತೀಯ ಮೂಲದ ಮಹಿಳೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಜುಲೈ 15 ರಂದು ಬಂಧಿಸಿದ್ದಾರೆ. 62.6 ಕೋಟಿ ರೂ. ಮೌಲ್ಯದ ಕೊಕೇನ್ ಸಾಗಿಸುತ್ತಿದ್ದ ಆರೋಪದ ಮೇಲೆ ಭಾರತ ಮೂಲದ ಮಹಿಳೆಯನ್ನು ಬಂಧಿಸಿರುವುದಾಗಿ ಡಿಆರ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದರು.

ಮಹಿಳೆಯು ಜುಲೈ 14 ರಂದು ದೋಹಾದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ನಿಖರ ಮಾಹಿತಿಯ ಆಧಾರದ ಮೇಲೆ ಡಿಆರ್‌ಐ ಅಧಿಕಾರಿಗಳು ಆಕೆಯನ್ನು ತಡೆದರು. ಬಳಿಕ ಆಕೆಯ ಲಗೇಜ್ ಪರಿಶೀಲಿಸಿದಾಗ ಎರಡು ಬಾಕ್ಸ್‌ಗಳು ಪತ್ತೆಯಾಗಿವೆ. ಆರು ಬಾಕ್ಸ್ ಓರಿಯೊ ಬಿಸ್ಕೆಟ್‌ಗಳು ಮತ್ತು ಮೂರು ಬಾಕ್ಸ್ ಚಾಪ್ಲೇಟ್‌ಗಳಲ್ಲಿ ಕ್ಯಾಪ್ಸುಲ್‌ಗಳನ್ನು ಪ್ಯಾಕ್ ಮಾಡಲಾಗಿತ್ತು. ಇವುಗಳನ್ನು ತೆರೆದು ನೋಡಿದಾಗ ಎಲ್ಲಾ ಒಂಬತ್ತು ಬಾಕ್ಸ್‌ಗಳಲ್ಲಿ ಕೊಕೇನ್ ಎಂದು ಹೇಳಲಾದ ಬಿಳಿ ಪುಡಿಯ ಪದಾರ್ಥದಿಂದ ತುಂಬಿದ ಕ್ಯಾಪ್ಸುಲ್‌ಗಳು ಇರುವುದು ಕಂಡುಬಂದಿದೆ.

ಮಹಿಳೆಯು 300 ಕ್ಯಾಪ್ಸುಲ್‌ಗಳಲ್ಲಿ ಆರು ಕೆಜಿಗೂ ಹೆಚ್ಚು ಕೊಕೇನ್ ಸಾಗಿಸುತ್ತಿದ್ದಳು ಎಂದು ಡಿಆರ್‌ಐ ತಿಳಿಸಿತ್ತು. ಎಲ್ಲಾ ಕ್ಯಾಪ್ಸುಲ್‌ಗಳನ್ನು ಸ್ಥಳದಲ್ಲಿಯೇ ಪರೀಕ್ಷಾ ಕಿಟ್ ಬಳಸಿ ಪರೀಕ್ಷೆಗೆ ಒಳಪಡಿಸಿದಾಗ ಇದು ಕೊಕೇನ್‌ಗೆ ಎಂಬುದು ದೃಢಪಟ್ಟಿತ್ತು. ಒಟ್ಟು 6.261 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ 62.6 ಕೋಟಿ ರೂ.ಗಳಾಗಿದ್ದು, ಮಾದಕ ದ್ರವ್ಯ ಮತ್ತು ಎನ್‌ಡಿಪಿಎಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಇದನ್ನು ವಶಪಡಿಸಿಕೊಳ್ಳಲಾಗಿತ್ತು .