ಬೆಂಗಳೂರು: ಸರ್ಕಾರದ ವಿರುದ್ಧ ಕಮಿಷನ್‌ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದ್ದಾರೆ.

ಕಮಿಷನ್‌ ಆರೋಪ ಮಾಡಿ ಗುತ್ತಿಗೆದಾರರು ಸಿಎಂಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯ ಅವರೇ ಗುತ್ತಿಗೆದಾರರ ಪ್ರೇಮ ಪತ್ರಕ್ಕೆ ತಮ್ಮ ಪ್ರತಿಕ್ರಿಯೆ ಏನು? ನಿಮ್ಮ ಸರ್ಕಾರದ ಬಗ್ಗೆ ಗುತ್ತಿಗೆದಾರರು ಪ್ರೇಮ ಪತ್ರ ಬರೆದಿದ್ದಾರೆ. ನಿಮ್ಮ ಸರ್ಕಾರದಲ್ಲಿ ಗುತ್ತಿಗೆದಾರರನ್ನ ಯಾವ ರೀತಿ ಕಾಡ್ತಿದ್ದಾರೆ ಅನ್ನೋದನ್ನ ಅವರ ಪ್ರೇಮ ಪತ್ರದಲ್ಲಿ ನಿವೇದನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಗುತ್ತಿಗೆದಾರರು ನಿಮ್ಮ ಎರಡು ವರ್ಷದ ಅವಧಿಯಲ್ಲಿ ಕಮಿಷನ್ ಡಬಲ್ ಆಗಿದೆ ಅಂತ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರೇ ಈಗ ಹೇಳಿ ಪೇ ಸಿಎಂ ಅಂತ ಪೋಸ್ಟರ್‌ ಅನ್ನು ಯಾರ ಮುಖಕ್ಕೆ ಅಂಟಿಸಬೇಕು? ಯಾರ ಮನೆ ಬಾಗಿಲಿಗೆ ಅಂಟಿಸಬೇಕು? ನಿಮ್ಮ ಮುಖಕ್ಕೆ ಈಗ ಪೇ ಸಿಎಂ ಅಂತ ಅಂಟಿಸಬೇಕು ಎಂದು ಸಿಟಿ ರವಿ ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮ ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡಿದ್ದಾರೆ. ಕೇರಳ, ಆಂಧ್ರಪ್ರದೇಶ, ತೆಲಂಗಾಣದ ಸಿಎಂಗಳ ಮೇಲೆ ಗುತ್ತಿಗೆದಾರರು ಆರೋಪ ಮಾಡಿಲ್ಲ. ಕರ್ನಾಟಕ ಸರ್ಕಾರದ ಸಚಿವರ ಮೇಲೆ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ನಿಮ್ಮ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಇದರ ನೈತಿಕ ಹೊಣೆ ಯಾರು ಹೊರಬೇಕು? ನೀವೇ ನೈತಿಕ ಹೊಣೆ ಹೊರಬೇಕು ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.