ಬೆಂಗಳೂರು: ಮುಖ್ಯಮಂತ್ರಿಗಳ ಹೆಸರಿನಲ್ಲೇ “ಆಪತ್ಕಾಲಯಾನ” ಎಂಬ ಅಂಬುಲೆನ್ಸ್ಗಳ ಸೇವೆಯನ್ನು ಒದಗಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ರಸ್ತೆ ಅಪಾಘಾತಕ್ಕೀಡಾದವರ ಗೋಲ್ಡನ್ ಅವಧಿಯ ಒಳಗಾಗಿ ಚಿಕಿತ್ಸೆ ದೊರಕಿಸಿಕೊಡುವ ನಿಟ್ಟಿನಲ್ಲಿ 65 ನೂತನ ಅಂಬುಲೆನ್ಸ್ಗಳ ಸೇವೆಗೆ ಇಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದಲ್ಲಿ ಪ್ರತಿ ವರ್ಷ 40 ಸಾವಿರ ಅಪಘಾತ ಪ್ರಕರಣಗಳು ನಡೆಯುತ್ತಿವೆ. ಜನರ ರಕ್ಷಣೆಗೆ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳ ಹೆಸರಿನಲ್ಲೇ “ಆಪತ್ಕಾಲಯಾನ” ಅಂಬುಲೆನ್ಸ್ಗಳ ಸೇವೆಯನ್ನು ಒದಗಿಸುತ್ತಿದ್ದೇವೆ ಎಂದರು.
ಮೊದಲ ಹಂತದಲ್ಲಿ 65 ಅಂಬುಲೆನ್ಸ್ಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಿಕೊಡುತ್ತಿದ್ದೇವೆ. ಅಪಘಾತಕ್ಕೀಡಾದವರಿಗೆ ಆಪತ್ಬಾಂಧವನ ರೀತಿಯಲ್ಲಿ ಕಾರ್ಯನಿರ್ವಹಿಸಲಿರುವ ಈ ಅಂಬುಲೆನ್ಸ್ಗಳಲ್ಲಿ 26 ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
39 ಬೇಸಿಕ್ ಲೈಫ್ ಸಪೋರ್ಟ್ ಅಂಬುಲೆನ್ಸ್ಗಳಿವೆ. ರಸ್ತೆ ಸಂಚಾರದಲ್ಲಿ ಹೆಚ್ಚು ಅಪಘಾತ ಸಂಭವಿಸುವ 65 ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಲಾಗಿದ್ದು, ಅಂತಹ ಸ್ಥಳಗಳ ಹತ್ತಿರದಲ್ಲಿರುವ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಈ ಅಂಬುಲೆನ್ಸ್ಗಳನ್ನು ನೀಡಲಾಗಿದೆ ಎಂದರು.
ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರ ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅಪಘಾತಗಳ ಪ್ರಕರಣಗಳಲ್ಲಿ ಸಾವುಗಳನ್ನು ತಡೆಯುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನ ಹಾಕಿಕೊಳ್ಳುತ್ತಿದೆ. ಆರೋಗ್ಯ ಇಲಾಖೆಯಿಂದ ಇಂದು 65 ಅಂಬುಲೆನ್ಸ್ಗಳನ್ನ ಜನಸೇವೆಗಾಗಿ ಮುಡಿಪಾಗಿಟ್ಟಿದ್ದೇವೆ. ರಾಜ್ಯದಾದ್ಯಂತ ಈ ಯೋಜನೆ ವಿಸ್ತರಿಸಲು ಬೇಕಾಗುವ ಹಣಕಾಸನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

