ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಾನ್‌ ವೆಜ್ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದೀಗ ಮತ್ತೆ ಚಿಕನ್‌ ಮಾಂಸದ ಬೆಲೆ ಏಕಾಏಕಿ ಗಗನಕ್ಕೇರಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಕೆ.ಜಿ ಕೋಳಿ ಮಾಂಸ 260 ರಿಂದ 280 ರೂ.ಗಳ ನಡುವೆ ಲಭ್ಯವಿದ್ದರೆ, ಇದೀಗ ಅದೇ ಚಿಕನ್ ಬೆಲೆ 340 ರಿಂದ 350 ರೂ. ಗಡಿ ದಾಟಿದೆ. ಕೆಲ ಪ್ರದೇಶಗಳಲ್ಲಿ ಈಗಾಗಲೇ ಕೆಜಿಗೆ 350 ರೂ. ದರ ತಲುಪಿದ್ದು, ಮುಂದಿನ ದಿನಗಳಲ್ಲಿ 370–380 ರೂ. ಆಗುವ ಸಾಧ್ಯತೆಯೂ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಚಿಕನ್ ಮಾಂಸದ ದಿಢೀರ್ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಕೋಳಿ ಸಾಕಾಣೆದಾರರು ನಡೆಸುತ್ತಿರುವ ಪ್ರತಿಭಟನೆ ಇದಕ್ಕೆ ಕಾರಣ ಎನ್ನಲಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಹೆಚ್ಚು ಹಣ ನೀಡಬೇಕು ಎಂದು ಕೋಳಿ ಸಾಕಾಣೆದಾರರು ಒತ್ತಾಯಿಸುತ್ತಿದ್ದಾರೆ.

ಇನ್ನೊಂದೆಡೆ ಕೋಳಿ ಉತ್ಪಾದನೆಯಲ್ಲೂ ಕುಸಿತ ಕಂಡುಬಂದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಚಿಕನ್ ಕೊರತೆ ಉಂಟಾಗಿ, ದರ ಏರಿಕೆಗೆ ಕಾರಣವಾಗಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಿಗೆ ತಮಿಳುನಾಡಿನಿಂದ ಕೋಳಿ ಮತ್ತು ಕೋಳಿ ಮಾಂಸ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಹೊರರಾಜ್ಯದ ಬೆಳವಣಿಗೆಗಳು ರಾಜ್ಯದ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರುತ್ತಿವೆ.