ಬೆಂಗಳೂರು : ಲಿವ್-ಇನ್ ರಿಲೇಶನ್‍ಶಿಪ್ ನಲ್ಲಿದ್ದ ಪ್ರೇಯಸಿಯನ್ನು ಕತ್ತು ಹಿಸುಕಿ ಹತ್ಯೆಗೈದ ಪ್ರಕರಣದಡಿ ಆರೋಪಿಯನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶರತ್(25) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಜೂನ್ 13ರಂದು ತನ್ನ ಜೊತೆಗಿದ್ದ ಪ್ರೇಯಸಿ ಅನುಷಾ ಎನ್.ಡಿ. ಎಂಬಾಕೆಯನ್ನು ಹತ್ಯೆಗೈದಿದ್ದ ಆರೋಪಿ, ವಕೀಲರಾಗಿರುವ ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿ ವಿಷಯ ತಿಳಿಸಿ ಪರಾರಿಯಾಗಿದ್ದ.

ವಕೀಲರು ನೀಡಿದ ಮಾಹಿತಿಯನ್ವಯ ಘಟನಾ ಸ್ಥಳಕ್ಕೆ ಶೇಷಾದ್ರಿಪುರಂ ಪೊಲೀಸರು ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಮನೆ ಮಾಲಕ ರಮೇಶ್ ಬಾಬು ಎಂಬುವರು ನೀಡಿದ ದೂರಿನ ಮೇರೆಗೆ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಶರತ್ ಹಾಗೂ ಅನುಷಾಗೆ ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಪರಿಚಯವಾಗಿತ್ತು. ಬೆಂಗಳೂರಿನ ಮಲ್ಲೇಶ್ವರದ 7ನೇ ಕ್ರಾಸ್‍ನಲ್ಲಿರುವ ರಮೇಶ್ ಬಾಬು ಎಂಬುವರಿಗೆ ಸೇರಿದ ಮನೆಯೊಂದರಲ್ಲಿ ಮಹದೇವ ಎಂಬುವರು ಬಾಡಿಗೆಗಿದ್ದರು. ಅವರ ಬಳಿ ವಾಟರ್ ಟ್ಯಾಂಕ್ ಚಾಲಕನಾಗಿ ಶರತ್ ಕೆಲಸ ಮಾಡುತ್ತಿದ್ದ. ಅದೇ ಮನೆಯಲ್ಲಿ ಆರು ತಿಂಗಳುಗಳಿಂದ ಶರತ್ ಹಾಗೂ ಅನುಷಾ ವಾಸವಿದ್ದರು.

ಜೂನ್ 14ರ ಮಧ್ಯಾಹ್ನ ಶರತ್, ತನ್ನ ವಕೀಲ ಸ್ನೇಹಿತರೊಬ್ಬರಿಗೆ ಕರೆ ಮಾಡಿ ಹತ್ಯೆ ಮಾಡಿರುವ ವಿಷಯ ಕುರಿತು ತಿಳಿಸಿ ಪರಾರಿಯಾಗಿದ್ದ. ಕೂಡಲೇ ಶೇಷಾದ್ರಿಪುರಂ ಪೊಲೀಸರಿಗೆ ವಕೀಲರು ಮಾಹಿತಿ ನೀಡಿದ್ದರು. ಮನೆ ವಿಳಾಸ ಆಧರಿಸಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಮನೆಗೆ ಬೀಗ ಹಾಕಿರುವುದನ್ನು ಕಂಡ ಪೊಲೀಸರು, ಕಿಟಕಿ ಬಳಿ ಇಟ್ಟಿದ್ದ ಬೀಗದ ಕೀನಿಂದ ಬಾಗಿಲು ತೆಗೆದು ಒಳ ಹೋದಾಗ ಅನುಷಾ ನೆಲದ ಮೇಲೆ ಮಲಗಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ಮನೆ ನಿರ್ವಹಣೆ, ಕೆಲಸದ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಗಲಾಟೆಯಾಗುತ್ತಿತ್ತು ಎನ್ನಲಾಗಿದ್ದು, ಕೃತ್ಯಕ್ಕೆ ನಿಖರ ಕಾರಣದ ಕುರಿತು ಆರೋಪಿಯನ್ನು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಶೇಷಾದ್ರಿಪುರಂ ಪೊಲೀಸರು ತಿಳಿಸಿದ್ದಾರೆ.