ಬೆಂಗಳೂರು: ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ತಡೆ ಗೋಡೆಗೆ ಡಿಕ್ಕಿ ಹೊಡೆದು ಮೋರಿಗೆ ಬಿದ್ದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಆರ್‌ಟಿ ನಗರದ ನಿವಾಸಿ ಶಾಹಿದ್ ಅಹಮ್ಮದ್ (22) ಹಾಗೂ ಜೆ.ಸಿ. ನಗರದ ನಿವಾಸಿ ಅಬ್ದುಲ್ ರೆಹಮಾನ್ (24) ಮೃತಪಟ್ಟವರು. ಇವರ ಸ್ನೇಹಿತ ಬುರಾನುದ್ದೀನ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಹಿದ್ ಅಹಮ್ಮದ್ ಕಾಲ್‌ಸೆಂಟರ್ ಉದ್ಯೋಗಿಯಾಗಿದ್ದ. ತನ್ನ ಇಬ್ಬರು ಸ್ನೇಹಿತರೊಂದಿಗೆ ತಡರಾತ್ರಿ ಊಟ ಮಾಡಲು ಹೊರಗೆ ಹೋಗಿದ್ದ. ಊಟ ಮುಗಿಸಿಕೊಂಡು ತಡರಾತ್ರಿ 2 ಗಂಟೆಗೆ ಸಾದಳ್ಳಿ ವಿಲೇಜ್ ಕಡೆಯಿಂದ ಸಿಗ್ನಲ್ ಕಡೆಗೆ ಬರುತ್ತಿದ್ದರು. ಶಾಹಿದ್ ಕಾರು ಚಲಾಯಿಸುತ್ತಿದ್ದರೆ, ಉಳಿದಿಬ್ಬರು ಕಾರಿನಲ್ಲಿ ಕುಳಿತಿದ್ದರು.
ಕಾರು ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದು ಅದರೊಳಗೆ ಬಿದ್ದಿತ್ತು. ಮೋರಿಗೆ ಬಿದ್ದ ರಭಸಕ್ಕೆ ಕಾರಿನೊಳಗೆಯೇ ಶಾಹಿದ್ ಅಹಮ್ಮದ್, ಅಬ್ದುಲ್ ರೆಹಮಾನ್ ಮೃತಪಟ್ಟಿದ್ದರು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಬಂದು ಕಾರಿನೊಳಗೆ ಸಿಲುಕಿದ್ದ ಮೂವರನ್ನೂ ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದೇ ಇದ್ದಾಗ ಜೆಸಿಬಿ ಹಾಗೂ ಕ್ರೇನ್ ಅನ್ನು ಸ್ಥಳಕ್ಕೆ ಕರೆಸಿಕೊಂಡು ಬೆಳಗ್ಗೆ ಸುಮಾರು 6 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿ ಮೋರಿಯೊಳಗೆ ಬಿದ್ದ ಕಾರನ್ನು ಮೇಲಕ್ಕೆ ಎತ್ತಲಾಗಿದೆ.
ನಂತರ ಕಾರಿನೊಳಗಿನಿಂದ ಇಬ್ಬರು ಯುವಕರ ಶವ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ ಬುರಾನುದ್ದೀನ್ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

