ಬೆಂಗಳೂರು: ದೇಶದ ಗಮನ ಸೆಳೆದಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ಹಾಲಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ವಿರುದ್ಧ ಭಾರಿ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಬೆಳಗ್ಗೆ 10.28ರ ಹೊತ್ತಿಗೆ ಕಾಂಗ್ರೆಸ್‌ನ ಡಿ.ಕೆ ಸುರೇಶ್ ಅವರಿಗಿಂತ ಮಂಜುನಾಥ್ ಅವರು 73,000 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇದೇ ಟ್ರೆಂಡ್ ಮುಂದುವರಿದರೆ ಮಂಜುನಾಥ್ ಅವರಿಗೆ ಸುಲಭ ಗೆಲುವು ಲಭಿಸಲಿದೆ. ಮಂಜುನಾಥ್ ಅವರ ಮುನ್ನಡೆ ಅಂತರ ನಿರಂತರವಾಗಿ ಏರುತ್ತಲೇ ಇದೆ. ಬಹುತೇಕ ಮಂಜುನಾಥ್ ಅವರಿಗೆ ಗೆಲುವು ಸುಲಭವಾಗಲಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಅಳಿಯರಾಗಿರುವ ಮಂಜುನಾಥ್ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಸ್ಪರ್ಧಿಸಿದ್ದಾರೆ. ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಂಜುನಾಥ್ ಹಾಲಿ ಸಂಸದ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ವಿರುದ್ಧ ಪ್ರಚಂಡ ಮುನ್ನಡೆ ಸಾಧಿಸಿ, ಗೆಲುವಿನತ್ತ ದಾಪುಗಾಲು ಇಡುತ್ತಿದ್ದಾರೆ.

