ಬೆಂಗಳೂರು : ಬಿಎಂಟಿಸಿ ಬಸ್ ಚಾಲನೆಯಲ್ಲಿರುವಾಗಲೇ ಹಠಾತ್ತನೇ ಬೆಂಕಿ ಹೊತ್ತಿಕೊಂಡು ಉರಿದಿರುವ ಘಟನೆ ನಗರದಲ್ಲಿ ಇಂದು ನಡೆದಿದೆ. ಸುಮಾರು 75 ಮಂದಿ ಪ್ರಯಾಣಿಕರು ಅವಘಡ ನಡೆಯುವ ವೇಳೆ ಪ್ರಯಾಣಿಸುತ್ತಿದ್ದು ಎಲ್ಲರೂ ಪಾರಾಗಿದ್ದಾರೆ.
ಕೆಎ 57 ಎಫ್ 4568 ಸಂಖ್ಯೆಯ ಬಸ್ ಬೆಳಗ್ಗೆ 5 ಗಂಟೆಗೆ ಮೆಜೆಸ್ಟಿಕ್ ನಿಂದ ಕಾಡುಗೋಡಿಗೆ ತೆರಳುತ್ತಿತ್ತು. ಈ ವೇಳೆ ಬಸ್ ನ ಎಂಜಿನ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿಯ ಹೊಗೆ ಕಾಣಿಸಿಕೊಂಡಿತ್ತು. ಕೂಡಲೇ ಜಾಗರೂಕರಾದ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರನ್ನು ಬಸ್ ನಿಂದ ಕೆಳಗೆ ಇಳಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು.
ಎಚ್‌ಎಎಲ್ ಘಟಕದ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಸುದೈವವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ. ಘಟನೆಗೆ ಕಾರಣವೇನೆಂದು ಇಲಾಖೆ ತನಿಖೆ ನಡೆಸುತ್ತಿದೆ.

