ಬೆಂಗಳೂರು: ನಗರದ ಲಗ್ಗೆರೆ ಬಸ್ ನಿಲ್ದಾಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಸೇರಿದ ಬಸ್ ಒಂದು ಭೀಕರ ಅಗ್ನಿ ಅವಘಡಕ್ಕೆ ಆಹುತಿಯಾಗಿದೆ.
ನಿನ್ನೆ ಸಂಜೆ ಸುಮಾರು 4:50ರ ಹೊತ್ತಿಗೆ ಮೆಜೆಸ್ಟಿಕ್ನಿಂದ ಲಗ್ಗೆರೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಬಸ್ಸನ್ನು ನಿಲುಗಡೆ ಮಾಡಿದ ಬಳಿಕ ಚಾಲಕ ಹಾಗೂ ನಿರ್ವಾಹಕರು ನಿಲ್ದಾಣದೊಳಗೆ ತೆರಳಿದ್ದರು. ಅದಾದ ಐದು ನಿಮಿಷಗಳಲ್ಲಿ ಬಸ್ನ ಇಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಘಟನೆ ಗಮನಕ್ಕೆ ಬಂದ ತಕ್ಷಣ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ, ಅಧಿಕಾರಿಗಳು, ಚಾಲಕ-ನಿರ್ವಾಹಕರು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದಾಗ್ಯೂ, ಬೆಂಕಿ ತೀವ್ರವಾಗಿ ವ್ಯಾಪಿಸಿಕೊಂಡ ಪರಿಣಾಮ ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಕೇವಲ 15ರಿಂದ 20 ನಿಮಿಷಗಳೊಳಗೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಘಟನೆ ಸಂಭವಿಸಿದ ವೇಳೆ ಬಸ್ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ.

