ಬೆಂಗಳೂರು: ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಹಕ್ಕಿ ಜ್ವರದಿಂದಾಗಿ ಕಾಗೆಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಆತಂಕ ಎದುರಾಗಿದೆ.

ಹಕ್ಕಿ ಜ್ವರಕ್ಕೆ ತಮಿಳನಾಡಿನಲ್ಲಿ 1,500ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿವೆ. ಮಹಾರಷ್ಟ್ರದಲ್ಲೂ ಹಕ್ಕಿ ಜ್ವರದ ವೈರಸ್​ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ H5N1 ಭೀತಿ ಶುರುವಾಗಿದೆ. ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಪಶುಸಂಗೋಪಾನ ಇಲಾಖೆ ಸೂಚಿಸಿದೆ.

ಹಕ್ಕಿ ಜ್ವರದ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. H5N1 ವೈರಸ್‌ ಪಕ್ಷಿಗಳಲ್ಲಿ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸೋಂಕಿತ ಪಕ್ಷಿಗಳ ನೇರ ಸಂಪರ್ಕ, ಲಾಲಾರಸ ಅಥವಾ ಮಲದಿಂದ ಮನುಷ್ಯರಲ್ಲೂ ಹಕ್ಕಿ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸೋಂಕಿತ ಪ್ರಾಣಿಗಳ ಮಲ, ಮೂಗು ಅಥವಾ ಬಾಯಿಯ ಸ್ರವಿಸುವಿಕೆಯಿಂದ ಮನುಷ್ಯರಿಗೆ ಈ ವೈಎಸ್​​ ಹರಡುವ ಸಾಧ್ಯತೆ ಹೆಚ್ಚು. ಮಾನವರಲ್ಲಿ ಹಕ್ಕಿ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಸೋಂಕಿತ ಹಕ್ಕಿಯೊಂದಿಗೆ ಸಂಪರ್ಕಕ್ಕೆ ಬಂದ 4 ರಿಂದ 6 ದಿನಗಳ ನಂತರ ಪ್ರಾರಂಭವಾಗುತ್ತದೆ.

ರೋಗ ಲಕ್ಷಣಗಳು : ಉಸಿರಾಟದಲ್ಲಿ ತೊಂದರೆ, ಜ್ವರ, ಕಣ್ಣು ಕೆಂಪಾಗುವುದು ಮತ್ತು ಕಿರಿಕಿರಿ, ಕೆಮ್ಮು, ಗಂಟಲು ನೋವು,
ಸ್ನಾಯು ಅಥವಾ ದೇಹದ ನೋವು, ತಲೆನೋವು -ಆಯಾಸ
ನ್ಯೂಮೋನಿಯಾ.

ಪೌಲ್ಟ್ರಿ ಮತ್ತು ವೆಟರ್ನರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತೆ. ಹಕ್ಕಿ ಜ್ವರಕ್ಕೆ ತುತ್ತಾದವರ ಸಾವಿನ ಪ್ರಮಾಣ ಶೇ.50ರಷ್ಟಿದ್ದು, ಸೋಂಕು ಹೆಚ್ಚಾದರೆ ಸಾಂಕ್ರಾಮಿಕ ಆಗುವ ಸಾಧ್ಯತೆ ಇದೆ. ಹೀಗಾಗಿ ಅರೆಬೆಂಡ ಆಹಾರ, ಅದರಲ್ಲಿಯೂ ಮಾಂಸಾಹಾರದಿಂದ ಈ ವೈರಸ್​​ ಹರಡುವ ಸಾಧ್ಯತೆ ಹೆಚ್ಚಿದೆ. ರೋಗ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಯ ವಹಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.