ಬೆಂಗಳೂರು: ನಾಳೆಯಿಂದ ಬೆಂಗಳೂರಿನ ಐತಿಹಾಸಿಕ ಕಡಲೆಕಾಯಿ ಪರಿಷೆ ಪ್ರಾರಂಭ ಆಗುತ್ತಿದ್ದು, ಭರ್ಜರಿ ಸಿದ್ದತೆ ಮಾಡಲಾಗಿದೆ.
ಸಾಮಾನ್ಯವಾಗಿ ಈ ಕಡಲೇಕಾಯಿ ಪರಿಷೆಯನ್ನ ಮೂರು ದಿನಗಳ ಕಾಲ ನಡೆಸಲಾಗುತ್ತಿತ್ತು, ಆದರೆ ಈ ಬಾರಿ 5 ದಿನ ನಡೆಸಲು ನಿರ್ಧಾರ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಳೆದ ಬಹಳಷ್ಟು ವರ್ಷಗಳಿಂದ ಬಸವನಗುಡಿಯ ಕಡಲೆಕಾಯಿ ಪರಿಷೆಯನ್ನ ಆಚರಿಸಿಕೊಂಡು ಬರಲಾಗುತ್ತಿದೆ.
ನಾಳೆ ಕಾರ್ತಿಕ ಮಾಸದ ಕೊನೆಯ ದಿನವಾಗಿದ್ದು, ನಾಳೆಯಿಂದ ಬಸವನಗುಡಿ ಕಡ್ಲೆಕಾಯಿ ಪರಿಷೆ ಪ್ರಾರಂಭ ಆಗಲಿದೆ. ಈ ಕಡಲೆಕಾಯಿ ಪರಿಷೆ ನವೆಂಬರ್ 21ರ ತನಕ ನಡೆಯಲಿದ್ದು, ಹಿಂದಿನ ವರ್ಷ ಈ ಜಾತ್ರೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಈ ವರ್ಷ ಸಹ ಅದಕ್ಕಿಂತ ಜಾಸ್ತಿ ಜನರು ಸೇರುವ ನಿರೀಕ್ಷೆ ಇದೆ,
ನಾಳೆ ಬೆಳಗ್ಗೆ 10:30 ಕ್ಕೆ ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ತುಲಾಭಾರ ಮಾಡಲಾಗುತ್ತದೆ ಹಾಗೂ ಐದು ಎತ್ತುಗಳಿಗೆ ಕಡಲೆಕಾಯಿ ಗಿಡ ತಿನ್ನಿಸುವ ಮೂಲಕ ಈ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಇನ್ನು ಈ ಬಸವನಗುಡಿ ಕಡ್ಲೆಕಾಯಿ ಪರಿಷೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸ್ಥಳೀಯ ಶಾಸಕರು ಚಾಲನೆ ನೀಡಲಿದ್ದಾರೆ.

