ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ  ಅವರನ್ನು ಆಗಸ್ಟ್ 3 ತನಕ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಅವರ ಪಾತ್ರ ಕಂಡುಬಂದ ಹಿನ್ನೆಲೆ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ಬಂಧಿಸಿ 11 ದಿನಗಳ ಕಾಲ ತನಿಖೆ ನಡೆಸಿದ್ದಾರೆ. ನಾಗೇಂದ್ರ ಅವರನ್ನು ಆರಂಭದಲ್ಲಿ 6 ದಿನ ಕಸ್ಟಡಿಗೆ ಪಡೆದಿದ್ದ ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣ ನೀಡಿ ಮತ್ತೆ ಕಸ್ಟಡಿಗೆ ಕೇಳಿದ್ದರು. ಈ ಹಿನ್ನೆಲೆ ನ್ಯಾಯಾಲಯ ನಾಗೇಂದ್ರ ಅವರನ್ನು ಎರಡನೇ ಬಾರಿಗೆ 5 ದಿನ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು.

ಇಂದು ನಾಗೇಂದ್ರ ಕಸ್ಟಡಿ ಅಂತ್ಯವಾದ ಹಿನ್ನೆಲೆ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಆದರೆ ಕೋರ್ಟ್‌ ಆಗಸ್ಟ್ 3 ತನಕ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.