ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಡ್ರಗ್ಸ್ ದಂಧೆಯನ್ನು ತೀವ್ರ ಹತೋಟಿಗೆ ತಂದಿದ್ದೇವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯನ್ನು ಹತ್ತಿಕ್ಕಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಈಗ ಮೆಡಿಕಲ್ ಶಾಪ್‌ಗಳಲ್ಲಿ ಸಿಗುತ್ತಿರುವ ನೋವು ನಿವಾರಕ ಮಾತ್ರೆಗಳಿಂದ ನಮಗೆ ಆತಂಕವಿದೆ. ಯಾವ ರೀತಿ ನಿಯಂತ್ರಿಸಬೇಕು ಎಂಬುದರ ಕುರಿತು ಚರ್ಚಿಸಲು ಮುಖ್ಯಮಂತ್ರಿಯವರು ಸಭೆ ಕರೆದಿದ್ದಾರೆ ಎಂದು ತಿಳಿಸಿದರು.

ನೋವು ನಿವಾರಕ ಮಾತ್ರೆಗಳನ್ನು ಮೆಡಿಸಿನ್ ಅಂತ ಮಾರಾಟ ಮಾಡಲಾಗುತ್ತಿದೆ. ವೈದ್ಯರು ಪ್ರಿಸ್‌ಕ್ರೈಬ್ ಮಾಡಿರುವುದನ್ನು ಸುಲಭವಾಗಿ ಪಡೆಯಲಾಗುತ್ತಿದೆ. ಇದಕ್ಕೆ ಕಾನೂನು ಬೇರೆ ಇದೆ. ಈ ಕುರಿತು ಡ್ರಗ್ ಕಂಟ್ರೋಲರ್ಸ್‌ಗಳಿಗೆ ಯಾವ ರೀತಿ ಹೇಳಬೇಕಾಗುತ್ತದೆ ಎಂಬುದರ ಕುರಿತು ಚರ್ಚಿಸಲಾಗುವುದು ಎಂದರು.