ಬೆಂಗಳೂರು: ರೆಡ್ ಸಿಗ್ನಲ್ ಇದ್ದ ಕಾರಣ ನಿಂತಿದ್ದ ಬೈಕ್ಗೆ ಹಿಂಬದಿಯಿಂದ ವೇಗವಾಗಿ ಬಂದು ಅಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಾಂತಿನಗರದ ಡಬಲ್ ರೋಡ್ನ ಸಂಗೀತ ಸಿಗ್ನಲ್ ಬಳಿ ದುರ್ಘಟನೆ ನಡೆದಿದೆ. ರೆಡ್ ಸಿಗ್ನಲ್ ಇದ್ದ ಕಾರಣ ಸವಾರ ಬೈಕ್ ನಿಲ್ಲಿಸಿದ್ದರು. ರಿಚ್ಮಂಡ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಅಂಬುಲೆನ್ಸ್ ಹಿಂದಿನಿಂದ ಬೈಕ್ಗೆ ಗುದ್ದಿದೆ. ಬೈಕ್ ಸಮೇತ 200 ಮೀಟರ್ ಎಳೆದೊಯ್ದಿದೆ.
ಅಪಘಾತದಲ್ಲಿ ಇಸ್ಮಾಯಿಲ್ (40) ಮತ್ತು ಪತ್ನಿ ಸಮೀನ್ ಬಾನು ಸಾವನ್ನಪ್ಪಿದ್ದಾರೆ. ಡಿಯೊ ಬೈಕ್ನಲ್ಲಿ ಇಬ್ಬರೂ ಬರುತ್ತಿದ್ದರು. ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ಚಾಲಕನಿಂದ ಅಪಘಾತವಾಗಿದೆ. ಅಂಬುಲೆನ್ಸ್ ಒಳಗೆ ಯಾರೂ ರೋಗಿ ಇರಲಿಲ್ಲ. ಆದರೂ, ಅತಿವೇಗವಾಗಿ ಬಂದು ಸಿಗ್ನಲ್ ಇದ್ದರೂ ಬ್ರೇಕ್ ಹಾಕದೇ ಅಪಘಾತವೆಸಗಿದ್ದಾನೆ.
ಅಪಘಾತ ಸ್ಥಳದಲ್ಲಿ ಸ್ಥಳೀಯರ ಆಕ್ರೋಶ ಹೊರಹಾಕಿ ಅಂಬುಲೆನ್ಸ್ ಅನ್ನು ಪಲ್ಟಿ ಹೊಡೆಸಿದ್ದಾರೆ. ಅಂಬುಲೆನ್ಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

