ಬೆಂಗಳೂರು: ಹಲಸಿನ ಹಣ್ಣು ಕೀಳಲು ಹೋಗಿ ಮರದಿಂದ ಬಿದ್ದು ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಯಲಹಂಕದಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಮೂಲದ ಆಕಾಶ್ ಕೊನೆಯುಸಿರೆಳೆದ ದುರ್ದೈವಿಯಾಗಿದ್ದಾರೆ. ರೈತಾಪಿ ಕುಟುಂಬದಿಂದ ಬಂದು, ಮೆರಿಟ್‌ನಲ್ಲಿ ಸರ್ಕಾರಿ ಸೀಟ್ ಪಡೆದು ಓದುತ್ತಿದ್ದ ಆಕಾಶ್ ನಿನ್ನೆ ರಾತ್ರಿ ಹಣ್ಣು ಕೀಳಲು ಮರ ಹತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಸ್ನೇಹಿತರು ತಕ್ಷಣ ಆಸ್ಪತ್ರೆಗೆ ಸೇರಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಯಲಹಂಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ಆಕಾಶ್ ಸಾಮಾನ್ಯ ವಿದ್ಯಾರ್ಥಿಯಲ್ಲ, ರಾಷ್ಟ್ರಮಟ್ಟದಲ್ಲಿ ಮಿಂಚಿದ್ದ ಅಪರೂಪದ ಸಾಧಕನಾಗಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಮಾಡಿದ ಅತ್ಯುತ್ತಮ ಸೇವೆಗಾಗಿ ಈತ ರಾಷ್ಟ್ರಪತಿಯವರಿಂದ ‘ಉತ್ತಮ ಸ್ವಯಂಸೇವಕ’ ಪ್ರಶಸ್ತಿ ಪಡೆದಿದ್ದನು. 2024ರ ನವದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕವನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದನು .