ಬೆಂಗಳೂರು : ಬುಕ್ಕಿಂಗ್ ಮಾಡಿದ್ದ ಆಟೋ ಸ್ಥಳಕ್ಕೆ ಆಗಮಿಸಲು ತಡವಾಗಿದ್ದಕ್ಕೆ ಬುಕಿಂಗ್ ಕ್ಯಾನ್ಸಲ್ ಮಾಡಿದ್ದ ಯುವತಿಯ ಮೇಲೆ ಹಲ್ಲೆ ಹಾಗೂ ಅವಾಚ್ಯ ಪದಗಳಿಂದ ನಿಂದಿಸಿದ್ದ ಓಲಾ ಆಟೋ ಚಾಲಕನ್ನು ಇದೀಗ ಮಾಗಡಿ ಸಂಚಾರಿ ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಂಡಿದ್ದಾರೆ.
ಕಳೆದ ಸೆ.2ರಂದು ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೋರ್ವಳು ಹಾಗೂ ಆಕೆಯ ಸ್ನೇಹಿತೆ ಇಬ್ಬರೂ ಓಲಾ ಆಟೋ ಬುಕ್ ಮಾಡಿದ್ದರು. ಸಕಾಲಕ್ಕೆ ಆಟೋ ಬಾರದ ಕಾರಣಕ್ಕೆ ಮತ್ತೊಂದು ಆಟೋವನ್ನು ಬುಕ್ ಮಾಡಿಕೊಂಡಿದ್ದರು. ಹೀಗಾಗಿ ಮೊದಲು ಬಂದ ಆಟೋದಲ್ಲಿ ಹತ್ತಿ ಹೋಗಿದ್ದರು.
ಆಗ ಅವರನ್ನು ಕ್ಯಾನ್ಸಲ್ ಆಗಿದ್ದ ಆಟೋ ಚಾಲಕ ಹಿಂಬಾಲಿಸಿ, ಯುವತಿಯರಿದ್ದ ಆಟೋವನ್ನು ಅಡ್ಡಗಟ್ಟಿ ಬಾಯಿಗೆ ಬಂದಹಾಗೆ ಬೈದು ಹಲ್ಲೆ ಮಾಡಿದ್ದ. ಘಟನೆಯನ್ನು ಯುವತಿಯು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಳು. ಅಲ್ಲದೇ ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಳು. ಪ್ರಕರಣ ಭೇದಿಸಿರುವ ಪೊಲೀಸರು, ಇದೀಗ ಆಟೋ ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ.

