ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯಲ್ಲಿ ಅವ್ಯವಹಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ತನ್ನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಬ್ಯಾಂಕ್, ಖಾತೆಗಳಲ್ಲಿನ ವಂಚನೆಯ ವಹಿವಾಟಿನ ಬಗ್ಗೆ ಬ್ಯಾಂಕ್ ಅರಿವು ಹೊಂದಿದೆ. ಅಕ್ರಮಗಳು ಬೆಳಕಿಗೆ ಬಂದಾಗ ಬ್ಯಾಂಕ್ ತಕ್ಷಣವೇ ಪ್ರಶ್ನಾರ್ಹ ವಹಿವಾಟುಗಳನ್ನು ವಂಚನೆ ಎಂದು ಘೋಷಿಸಿದೆ.
ಸಂಪೂರ್ಣ ತನಿಖೆ ಮತ್ತು ಅಪರಾಧಿಗಳ ಪತ್ತೆಗಾಗಿ ಮೇ 30 ರಂದು ಕೇಂದ್ರೀಯ ತನಿಖಾ ದಳಕ್ಕೆ ದೂರು ನೀಡಿದ್ದೇವೆ. ಮುಂದಿನ ವಿಚಾರಣೆಗಾಗಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ.
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಮೂವರ ಹೆಸರನ್ನು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್‌ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ.
ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್, ಮೆಸೇಜ್ ಬಂದಿಲ್ಲ. ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬ್ಯಾಕ್‌ನ 6 ಮಂದಿ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

