ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಎರಡೂವರೆ ವರ್ಷದಲ್ಲಿ 2,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ಇಲ್ಲಿನ ಮಾಲಿನಿ ಸಿಟಿಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಬ್ಬು ಬೆಳೆಗಾರರು ಸೂಕ್ತ ದರಕ್ಕೆ ದೊಡ್ಡ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸಲಿಲ್ಲ. 30ಕ್ಕೂ ಹೆಚ್ಚು ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಎಫ್ಆರ್ಪಿ ದರ ಘೋಷಿಸಿದ್ದು ನಿಜ. ಆದರೆ, ಅದಕ್ಕೂ ಹೆಚ್ಚಿನ ದರ ನೀಡುವ ಅವಕಾಶ ರಾಜ್ಯ ಸರ್ಕಾರಕ್ಕೆ ಇದೆ’ ಎಂದರು.
‘ಕರ್ನಾಟಕ ಅತೀ ಹೆಚ್ಚು ಕಬ್ಬು ಬೆಳೆಯುವ ರಾಜ್ಯ. ಇದರಿಂದ ₹40 ಸಾವಿರ ಕೋಟಿ ಆದಾಯ ಸರ್ಕಾರಕ್ಕೆ ಬರುತ್ತದೆ. ಆದರೆ, ಪ್ರತಿ ಟನ್ಗೆ ₹50 ಪರಿಹಾರ ಘೋಷಿಸಿದ್ದಾರೆ. 54 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಆದರೂ ಖರೀದಿ ಕೇಂದ್ರ ತೆರೆದಿಲ್ಲ. ಶೀತಲೀಕರಣ ಘಟಕ ತೆರೆದಿಲ್ಲ. ಕಲಬುರಗಿ ಜಿಲ್ಲೆಯಲ್ಲಿ 6.5 ಲಕ್ಷ ಟನ್ ತೊಗರಿ ಬೆಳೆದಿದ್ದಾರೆ. ಅಡಕೆಗೆ ಚುಕ್ಕೆ ರೋಗ ಬಂದಿದೆ. ಇದೆಲ್ಲವನ್ನೂ ಸರ್ಕಾರ ಗಮನಿಸುತ್ತಲೇ ಇಲ್ಲ’ ಎಂದರು.

