ಚಿಕ್ಕೋಡಿ: ನಾಯಿಯ ನಿಯತ್ತಿಗೆ ಯಾರೂ ಸಾಟಿ ಇಲ್ಲ ಎಂಬುದು ಗೊತ್ತಿರುವ ವಿಷಯ, ಇಂದು ತುತ್ತು ಅನ್ನ ಹಾಕಿದವನನ್ನು ನಾಯಿ ಎಂದಿಗೂ ಮರೆಯುವುದಿಲ್ಲ.ಇಲ್ಲೊಂದು ನಾಯಿ ತನ್ನ ಸ್ವಾಮಿನಿಷ್ಠೆ, ಪ್ರೀತಿ, ಚುರುಕುತನದಿಂದ ಎಲ್ಲರನ್ನೂ ಅಚ್ಚರಿ ಆನಂದಲ್ಲಿ ಕೆಡವಿದೆ. 195 ಕಿಲೋಮೀಟರ್ ಕ್ರಮಿಸಿ ತನ್ನ ಮಾಲೀಕನ ಮನೆಯ ಮುಂದೆ ಪ್ರತ್ಯಕ್ಷವಾಗಿದೆ! ಈ ಸುದ್ದಿ ಹಾಗೂ ನಾಯಿಯ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯಮಗರ್ಣಿಯ ಜ್ಞಾನದೇವ ಕುಂಬಾರ ಎಂಬವರಿಗೆ ಸೇರಿದ ಶ್ವಾನವಿದು. ಇದರ ಹೆಸರು ಮಹಾರಾಜ. ಮಹಾರಾಷ್ಟ್ರದಲ್ಲಿ ನಾಪತ್ತೆಯಾಗಿದ್ದ ಈ ಶ್ವಾನ 4 ದಿನಗಳ ಬಳಿಕ ಮನೆಯ ಮುಂದೆ ಪ್ರತ್ಯಕ್ಷವಾದುದನ್ನು ಕಂಡು ಮಾಲೀಕ ದಂಗಾಗಿದ್ದಾರೆ. ಇದು ಹೇಗೆ ಮರಳಿ ದಾರಿ ಹುಡುಕಿಕೊಂಡಿರಬಹುದು ಎಂಬ ಆಶ್ಚರ್ಯ ಎಲ್ಲರಲ್ಲೂ ಮೂಡಿದೆ.
ಇತ್ತೀಚೆಗೆ ಆಷಾಢ ಏಕಾದಶಿ ನಿಮಿತ್ತ ಇವರು ಕುಟುಂಬ ಸಮೇತ ಸೊಲ್ಹಾಪುರದ ಪಂಢರಪುರಕ್ಕೆ ತೀರ್ಥಯಾತ್ರೆಗೆ ಹೋಗಿದ್ದರು. ಜೊತೆಗೆ ಮಹಾರಾಜನೂ ತೆರಳಿತ್ತು. ಆದರೆ ಅಲ್ಲಿ ಜನಜಂಗುಳಿಯ ನಡುವೆ ಮಹಾರಾಜ ಮಿಸ್ ಆಗಿದ್ದ. ಎಷ್ಟೇ ಹುಡುಕಿದರೂ ಸಹ ಕಾಣದಾಗಿದ್ದ. ಆತನನ್ನು ಹುಡುಕಿ ಕಾಣದೆ ಇನ್ನು ಈತ ಸಿಗಲಾರ ಎಂದುಕೊಂಡ ಮರಳಿ ಬಂದಿದ್ದರು.
ಪಂಢರಪುರದಿಂದ ಯಮಗರ್ಣಿಗೆ 195 ಕಿಲೋಮೀಟರ್ ದೂರವಿದೆ. ಇವರು ಮನೆಗೆ ಬಂದ ನಾಲ್ಕು ದಿನಗಳ ಬಳಿಕ ಮಹಾರಾಜ, ಮನೆಯ ಮುಂದೆ ಕಾಣಿಸಿಕೊಂಡಿದ್ದಾನೆ! ಸುಮಾರು 195 ಕಿಮೀ ಕ್ರಮಿಸಿ ಮನೆಗೆ ಮರಳಿದ್ದಾನೆ. ಇದನ್ನು ಕಂಡು ಕುಟುಂಬದವರು ಮಾತ್ರವಲ್ಲ, ಇಡೀ ಗ್ರಾಮ ಚಕಿತವಾಗಿದೆ. ಶ್ವಾನಕ್ಕೆ ಹಾರ ಹಾಕಿ ಗುಲಾಲ್ ಹಚ್ಚಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಶ್ವಾನ ನಿಷ್ಠೆಗೆ ಇಡೀ ಯಮಗರ್ಣಿ ಗ್ರಾಮಸ್ಥರು ಫಿದಾ ಆಗಿದ್ದಾರೆ.

