ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣಾಧೀನ ಬಂಧಿ, ನಟ ದರ್ಶನ್ ಸಿಗರೇಟ್ ಸೇದಿದ ಫೊಟೋ ವೈರಲ್ ಆದ ಬೆನ್ನಲ್ಲೇ ತಮಗೂ ಬೀಡಿ, ಸಿಗರೇಟ್‌ ಹಾಗೂ ತಂಬಾಕು ನೀಡುವಂತೆ ನಗರದ ಹಿಂಡಲಗಾ ಕಾರಾಗೃಹದಲ್ಲಿ ಭಾನುವಾರ ಕೈದಿಗಳು ಪ್ರತಿಭಟನೆ ನಡೆಸಿದರು.

ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟ್ ಸೇದಲು ಅವಕಾಶ ನೀಡಿದ್ದೀರಿ, ನಮಗೂ ಬೀಡಿ, ಸಿಗರೇಟ್‌ ಮತ್ತು ತಂಬಾಕು ನೀಡಿ ಎಂದು ಆಗ್ರಹಿಸಿದರು. ನಮ್ಮ ಬೇಡಿಕೆಯನ್ನು ಈಡೇರಿಸುವವರೆಗೂ ನಾವು ಉಪಾಹಾರವನ್ನು ಸೇವಿಸುವುದಿಲ್ಲ ಎಂದು ಪಟ್ಟು ಹಿಡಿದರು ಎಂದು ಮೂಲಗಳು ತಿಳಿಸಿವೆ. ಕೈದಿಗಳ ಈ ಬೇಡಿಕೆಯಿಂದ ಜೈಲಿನ ಅಧಿಕಾರಿಗಳು, ಸಿಬ್ಬಂದಿ ಕಂಗಾಲಾದರು. ವಿಷಯ ತಿಳಿದು, ಉನ್ನತ ಅಧಿಕಾರಿಗಳು ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಬೀಡಿ, ಸಿಗರೇಟ್‌ ನೀಡದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿಯೂ ಕೈದಿಗಳು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.