ಚಿಕ್ಕೋಡಿ : ಚಿಕ್ಕೋಡಿಯಲ್ಲಿ ವಿದ್ಯುತ್ ತಗುಲಿ ಮನೆಯ ಮೇಲಿಂದ ಬಿದ್ದು 9 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ದುರಂತ ನಡೆದಿದೆ.ಮೃತ ಬಾಲಕಿಯನ್ನು ಸಾನ್ವಿ ಕಾಂಬಳೆ (9) ಎಂದು ಗುರುತಿಸಲಾಗಿದೆ.

ಆಕೆ ಇಂಗಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ನಿನ್ನೆ ಸಂಜೆ ವೇಳೆ ಮನೆಯಲ್ಲಿ ಆಟವಾಡುತ್ತಿದ್ದಾಗ, ಮನೆಯ ಮೇಲಿದ್ದ ವಿದ್ಯುತ್ ತಂತಿಯ ಮೇಲೆ ಸ್ಕಿಪ್ಪಿಂಗ್ ಹಗ್ಗ ಬಿದ್ದಿದೆ. ಹಗ್ಗವನ್ನು ತೆಗೆದುಕೊಳ್ಳಲು ಮೇಲಕ್ಕೆ ಹೋದಾಗ ಬಾಲಕಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿದೆ ಎನ್ನಲಾಗಿದೆ.

ತಕ್ಷಣವೇ ಬಾಲಕಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.