ಬೆಳಗಾವಿ : ಫೇಸ್‌ಬುಕ್ ಮೂಲಕ ಪರಿಚಯವಾಗಿ ಪ್ರೀತಿ ನಾಟಕವಾಡಿ, ವಿದೇಶದಿಂದ ಕೋಟಿ ಮೌಲ್ಯದ ಉಡುಗೊರೆ ಕಳುಹಿಸಿರುವುದಾಗಿ ನಂಬಿಸಿ ವ್ಯಕ್ತಿಯಿಂದ 7.05 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಯರಗಟ್ಟಿ ತಾಲೂಕಿನ ಕುರುಬಗಟ್ಟಿ ಗ್ರಾಮದ ನಿವಾಸಿ ಲಕ್ಕಪ್ಪ ಸನ್ನಿಂಗನವರ ವಂಚನೆಗೆ ಒಳಗಾದವರಾಗಿದ್ದಾರೆ. ಕೆಲ ತಿಂಗಳ ಹಿಂದೆ ‘ರೋಸಂಜೆಲ್‌ಪಾಜ್’ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಅವರಿಗೆ ಫ್ರೆಂಡ್ ರಿಕ್ವೆಷ್ಟ್ ಬಂದಿದ್ದು, ಅದನ್ನು ಸ್ವೀಕರಿಸಿದ ಬಳಿಕ ಇಬ್ಬರ ನಡುವೆ ಪರಿಚಯ ಬೆಳೆದಿದೆ. ಆರಂಭದಲ್ಲಿ ಸಾಮಾನ್ಯ ಮಾತುಕತೆಯಷ್ಟೇ ನಡೆಸುತ್ತಿದ್ದ ಆರೋಪಿತರು, ನಂತರ ವಾಟ್ಸಾಪ್ ಮೂಲಕ ಕರೆ ಹಾಗೂ ಸಂದೇಶಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ತನ್ನನ್ನು ವಿದೇಶದಲ್ಲಿ ವಾಸಿಸುವ ಮಹಿಳೆ ಎಂದು ಪರಿಚಯಿಸಿಕೊಂಡಿದ್ದರು.
ಕ್ರಮೇಣ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡ ಆರೋಪಿತರು, ಪ್ರೀತಿಸುತ್ತಿರುವುದಾಗಿ ನಂಬಿಸಿ ವಿಶ್ವಾಸ ಗಳಿಸಿದ್ದರು. ಬಳಿಕ ಭಾರತಕ್ಕೆ ಬರಲು ಸಾಧ್ಯವಾಗದ ಕಾರಣ ತಮ್ಮ ಪ್ರೀತಿಯ ನೆನಪಿಗಾಗಿ 80 ಸಾವಿರ ಪೌಂಡ್ (ಸುಮಾರು 1.03 ಕೋಟಿ) ಮೌಲ್ಯದ ಉಡುಗೊರೆ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಪಾರ್ಸೆಲ್ ಮೂಲಕ ಕಳುಹಿಸಿರುವುದಾಗಿ ತಿಳಿಸಿ ಹಳ್ಳಕ್ಕೆ ಕೆಡವಿಕೊಂಡಿದ್ದರು.
ಕೆಲ ದಿನಗಳ ಬಳಿಕ ತಾವು ಕಳುಹಿಸಿದ ಪಾರ್ಸೆಲ್ ಭಾರತಕ್ಕೆ ತಲುಪಿದ್ದು, ಅದನ್ನು ಬಿಡುಗಡೆ ಮಾಡಿಸಿಕೊಳ್ಳಲು ವಿವಿಧ ಶುಲ್ಕಗಳನ್ನು ಪಾವತಿಸಬೇಕೆಂದು ಹೇಳಿ. ಪಾರ್ಸೆಲ್ ಕ್ಲಿಯರೆನ್ಸ್ ಶುಲ್ಕ, ಮನಿ ಲಾಂಡರಿಂಗ್ ಪ್ರಮಾಣಪತ್ರ ಶುಲ್ಕ, ಆದಾಯ ತೆರಿಗೆ ಪಾವತಿ, ಕಸ್ಟಮ್ಸ್ ಕ್ಲಿಯರೆನ್ಸ್ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಆರೋಪಿತರು ಹಣದ ಬೇಡಿಕೆ ಇಟ್ಟಿದ್ದಾರೆ.
ಆರೋಪಿತರ ಮಾತುಗಳನ್ನು ನಂಬಿದ ಲಕ್ಕಪ್ಪ ಸನ್ನಿಂಗನವರ ಏ. 17ರಿಂದ ಮೇ 22ರವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 7.05 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಾವತಿಸಿದ ಬಳಿಕವೂ ಪಾರ್ಸೆಲ್ ದೊರೆಯದೇ ಇದ್ದಾಗ ಹಾಗೂ ಮತ್ತಷ್ಟು ಹಣಕ್ಕೆ ಬೇಡಿಕೆ ಬಂದಾಗ ಅನುಮಾನಗೊಂಡು ಪರಿಶೀಲನೆ ನಡೆಸಿದ್ದಾರೆ. ಆಗ ತಾವು ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ತಿಳಿದು ಬಂದಿದೆ.
ಘಟನೆ ಕುರಿತು ಲಕ್ಕಪ್ಪ ಸನ್ನಿಂಗನವರ ಅವರು ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

