ಬೆಳಗಾವಿ: ಜಾತ್ರೆಯಲ್ಲಿ ಪ್ರಸಾದ ಸೇವಿಸಿ 46 ಜನ ಅಸ್ವಸ್ಥರಾಗಿದ್ದು, ಐವರ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ನಡೆದಿದ್ದ ಭೀರೇಶ್ವರ ಮತ್ತು ಕರೆಮ್ಮ ಜಾತ್ರೆಯಲ್ಲಿ ಅನ್ನ ಪ್ರಸಾದ ಮತ್ತು ಮಾವಿನ ಹಣ್ಣಿನ ಸೀಕರಣೆಯನ್ನು ಗ್ರಾಮಸ್ಥರು ಸೇವಿಸಿದ್ದರು. ಆದರೆವ ಸೇವಿಸಿದ ಕೆಲವೇ ಹೊತ್ತಲ್ಲಿ ಜನರಲ್ಲಿ ವಾಂತಿ, ಬೇಧಿ ಶುರುವಾಗಿದ್ದು ಅಸ್ವಸ್ಥಗೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯ ಶಾಸಕ ವಿಶ್ವಾಸ್ ವೈದ್ಯ ಆಸ್ಪತ್ರೆಗೆ ದೌಡಾಯಿಸಿ ಅಗತ್ಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದಾರೆ.
ಇನ್ನು ಪ್ರಸಾದ ಸೇವಿಸಿ ಐವರು ಗಂಭೀರಗೊಂಡಿದ್ದು ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಅಸ್ವಸ್ಥ ಜನರನ್ನು ಸವದತ್ತಿ ಸಾರ್ವಜನಿಕ ಆಸ್ಪತ್ರೆ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

