ಬೆಳಗಾವಿ : ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಸಿಮೆಂಟ್ ತುಂಬಿದ ಲಾರಿ ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ್ದರೆ, ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾಳ ಶಿರಗೂರ ಗ್ರಾಮದ ಬಳಿ ನಡೆದಿದೆ.
ಮೃತ ಬಾಲಕನನ್ನು ಹಾಳ ಶಿರಗೂರ ಗ್ರಾಮದ ಅಮೀತ ಕಾಂಬಳೆ (11) ಎಂದು ಗುರುತಿಸಲಾಗಿದೆ. 5ನೇ ತರಗತಿಯಲ್ಲಿ ಅಮೀತ ಓದುತ್ತಿದ್ದ. ಇಂದು ಬೆಳಗ್ಗೆ ಎಂದಿನಂತೆ ಅಂಜಲಿ ಕಾಂಬಳೆ ಹಾಗೂ, ಅವಿನಾಶ ಕಾಂಬಳೆ ಜೊತೆ ಬಿ ಬಿ ಬಾವಿ ಸರ್ಕಾರಿ ಫ್ರೌಢ ಶಾಲೆ ಶಾಲೆಗೆ ಹೋಗುತ್ತಿದ್ದರು.
ಇದೇ ಸಮಯಕ್ಕೆ ಕುಡಚಿ ಪಟ್ಟಣದ ಹೊರ ವಲಯದ ಮೂಲಕ ಹಾರೂಗೇರೆ ಕಡೆಗೆ ಹೊರಟ್ಟಿದ್ದ ವೇಳೆ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಸಿಮೆಂಟ್ ತುಂಬಿದ್ದ ಲಾರಿ ಪಲ್ಟಿ ಹೊಡೆದ ಪರಿಣಾಮ ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದ ವಿದ್ಯಾರ್ಥಿಗಳ ಮೇಲೆ ಉರುಳಿದೆ.
ಅದೃಷ್ಟವಾಶತ್ ಅಂಜಲಿ ಹಾಗೂ ಅವಿನಾಶ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರೆ, ಅಮೀತ ಲಾರಿಯಡಿ ಸಿಲುಕಿ ಮೃತಪಟ್ಟಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಸಿಬ್ಬಂದಿಗಳು ರಕ್ಷಣಾ ಕಾರ್ಯ ನಡೆಸಿದ್ದಾರೆ.
ಗಾಯಗೊಂಡ ಅಂಜಲಿ ಹಾಗೂ ಅವಿನಾಶನನ್ನು ಹಾರೂಗೇರಿ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದ್ದು, ಅಮೀತ ಮೃತದೇಹವನ್ನು ಕ್ರೇನ್ ಹಾಗೂ ಜೆಸಿಬಿ ಮೂಲಕ ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ. ಸದ್ಯ ಸ್ಥಳಕ್ಕೆ ಕುಡಚಿ ಪೋಲಿಸರ ಬೇಟಿ, ಪ್ರಕರಣ ದಾಖಲಿಸಲಾಗಿದೆ.

