ಬಳ್ಳಾರಿ: 9ನೇ ತರಗತಿ ವಿದ್ಯಾರ್ಥಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಇತರ ವಿದ್ಯಾರ್ಥಿಗಳು ಮತ್ತು ವಾರ್ಡನ್ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿರುವ ಘಟನೆ ಬಳ್ಳಾರಿಯ ಗುರುಕುಲ ವಸತಿ ಶಾಲೆಯಲ್ಲಿ ನಡೆದಿದೆ. ಭೀಕರ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾತ್ರಿ ಊಟದ ಬಳಿಕ ಎಲ್ಲರೂ ಮಲಗಿಕೊಂಡ ಮೇಲೆ ವಿದ್ಯಾರ್ಥಿಯೋರ್ವ ಮಂಚದ ರಾಡ್ ತೆಗೆದುಕೊಂಡು ಕಂಡ ಕಂಡವರ ಮೇಲೆ ಹಲ್ಲೆ ಮಾಡಿದ್ದು, ಎಂಟು ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಬಾಲಕನ ಈ ಹುಚ್ಚಾಟದಿಂದಾಗಿ 7 ಬಾಲಕರಿಗೆ ಗಂಭೀರ ಗಾಯಗಳಾಗಿದ್ದು, ಬಳ್ಳಾರಿ ಬಿಮ್ಸ್ ಮತ್ತು ಟ್ರಾಮಕೇರ್ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಲಾಗಿದೆ.
ಹಾಸ್ಟೆಲ್‌ನ ವಾರ್ಡನ್ ಮೇಲೂ ಬಾಲಕ ಹಲ್ಲೆ ಮಾಡಿದ್ದು,ಹಲ್ಲೆಯ ಬಳಿಕ ಆತ ಓಡಿ ಹೋಗಿದ್ದಾನೆ. ಗಾಯಾಳುಗಳೆಲ್ಲರೂ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕರಾಗಿದ್ದಾರೆ. ತಡರಾತ್ರಿ ಈ ಘಟನೆ ನಡೆದಿದ್ದು, ಮಕ್ಕಳ ಪೋಷಕರನ್ನು ಈ ಘಟನೆ ಬೆಚ್ಚಿ ಬೀಳಿಸಿದೆ.
ಮಾಹಿತಿಯ ಪ್ರಕಾರ ಆರಂಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದ್ದು, ಅದೇ ವಿಚಾರ ದೊಡ್ಡದು ಮಾಡಿದ ಒಂಬತ್ತನೇ ತರಗತಿ ಬಾಲಕನಿಂದ ಸಿಕ್ಕ ಸಿಕ್ಕ ವಿದ್ಯಾರ್ಥಿಗಳ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಪರಿಣಾಮ ರಾಡ್‌ನಿಂದ ಬಿದ್ದ ಏಟಿಗೆ ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

