ಬಳ್ಳಾರಿ :  ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಮತ್ತು ಅವರ ಗ್ಯಾಂಗ್‌ 16 ಮಂದಿ ಬಂಧನದಲ್ಲಿದ್ದಾರೆ. ದರ್ಶನ್ ಬಂಧನವಾಗಿ ಈಗಾಗಲೇ ಮೂರು ತಿಂಗಳುಗಳೇ ಕಳೆದು ಹೋಗಿವೆ. ಈವರೆಗೆ ದರ್ಶನ್ ಕಡೆಯಿಂದ ಜಾಮೀನಿಗೆ ಅರ್ಜಿ ಸಲ್ಲಿಕೆ ಆಗಿಲ್ಲ. ಇಂದು (ಸೆಪ್ಟೆಂಬರ್ 12) ಕೋರ್ಟ್​ ಎದುರು ದರ್ಶನ್ ಅವರನ್ನು ಹಾಜರುಪಡಿಸಲಾಗುತ್ತಿದೆ. ಇಂದಿಗೆ ಅವರ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ.

ಸೆಪ್ಟೆಂಬರ್ 9ರಂದು ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಂಡಿತ್ತು. ಹೀಗಾಗಿ, ಅವರನ್ನು ಕೋರ್ಟ್ ಎದುರು ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರುಪಡಿಸಲಾಗಿತ್ತು. ಈ ವೇಳೆ ಚಾರ್ಜ್​ಶೀಟ್ ಪ್ರತಿಯನ್ನು ಆರೋಪಿ ಪರ ವಕೀಲರಿಗೆ ನೀಡಲಾಗಿತ್ತು. ಆ ಬಳಿಕ ಜಡ್ಜ್​ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 12ರವರೆಗೆ ವಿಸ್ತರಣೆ ಮಾಡಿದ್ದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 3991 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಹೇಳಿಕೆ ಉಲ್ಲೇಖ ಆಗಿದೆ. ವಿಚಾರಣೆ ವೇಳೆ ದರ್ಶನ್ ಅವರು ತಾವು ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಎಲ್ಲಿಯೂ ಕೊಲೆಯನ್ನು ಇವರೇ ಮಾಡಿದ್ದಾರೆ ಎಂಬ ವಿಚಾರ ಉಲ್ಲೇಖ ಆಗಿಲ್ಲ.