ಬಾಗಲಕೋಟೆ: ಮನೆಯ ಚಾವಣಿ ಕುಸಿದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಬಾಗಲಕೋಟೆಯ ಕಂದಗಲ್ಲ ಗ್ರಾಮದಲ್ಲಿ ಘಟನೆ ನಡೆದಿದೆ.

ಗೀತಾ ಈಶ್ವರಯ್ಯಾ ಆದಾರಪುರಮಠ (15), ರುದ್ರಯ್ಯಾ ಈಶ್ವರಯ್ಯಾ ಆದಾಪುರಮಠ (10) ಮೃತ ದುರ್ದೈವಿಗಳು. 40-50 ವರ್ಷಗಳಷ್ಟು ಹಳೆಯ ಮನೆಗೆ ಮಣ್ಣಿನ ಚಾವಣಿ ಇತ್ತು.

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮನೆ ಸೋರಿಕೆಯಾಗಿತ್ತು. ಈ ವೇಳೆ ಚಾವಣಿಗೆ ಮಣ್ಣು ಹಾಕಿ ತಟ್ಟಿ ಸರಿಮಾಡಿಕೊಂಡಿದ್ದರು. ಆದರೆ ಶುಕ್ರವಾರ ಏಕಾಏಕಿ ಮನೆ ಚಾವಣಿ ಕುಸಿದಿದೆ. ಮನೆಯೊಳಗೆ ಇದ್ದ ಮಕ್ಕಳಿಬ್ಬರ ಮೇಲೆ ರಭಸವಾಗಿ ಮಣ್ಣು ಬಿದ್ದಿದೆ.

D

ಈ ದುರ್ಘಟನೆ ನಡೆದಾಗ ಮನೆಯಲ್ಲಿ ಮಕ್ಕಳ ತಂದೆ-ತಾಯಿ ಇರಲಿಲ್ಲ. ಮಕ್ಕಳ ಮೇಲೆ ಚಾವಣಿ ಬಿದ್ದ ಪರಿಣಾಮ ಹೊರಬರಲು ಆಗದೆ ಮಣ್ಣಲ್ಲಿ ಸಿಲುಕಿದ್ದಾರೆ. ಇತ್ತ ಕೂಡಲೇ ಸ್ಥಳೀಯರ ಸಹಾಯದಿಂದ ಮಕ್ಕಳನ್ನು ಹೊರತೆಗೆಯಲಾಯಿತು. ಇಳಕಲ್ಲ ತಾಲ್ಲೂಕಾಸ್ಪತ್ರೆಗೆ ಸಾಗಿಸಲಾಯಿತಾದರೂ ಮಕ್ಕಳಿಬ್ಬರು ಬದುಕುಳಿಯಲಿಲ್ಲ.

ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆಗೆ ಶಾಸಕ ವಿಜಯಾನಂದ ಕಾಶಪ್ಪನರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.