ಬಾಗಲಕೋಟೆ: ಜಮಖಂಡಿಯ ಶಾಂತಿನಗರದ ಸಮೀಪದ ಕಾಡಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದು ಕಾಡ್ಗಿಚ್ಚು ವ್ಯಾಪಿಸಿದೆ. ಈ ಭೀಕರ ಘಟನೆಯಲ್ಲಿ ಹತ್ತು ಎಕರೆಗಿಂತಲೂ ಹೆಚ್ಚಿನ ಭೂಭಾಗ ಸುಟ್ಟು ಭಸ್ಮವಾಗಿದೆ.
ಇನ್ನು ಗಾಳಿ ಹೆಚ್ಚಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ ಕಾರಣ ಅರಣ್ಯಕ್ಕೆ ವೇಗವಾಗಿ ಹಬ್ಬಿದ್ದು, ಬಹುಪಾಲು ಪ್ರದೇಶ ಸಂಪೂರ್ಣಬೆಂಕಿಗೆ ಆಹುತಿಯಾಗಿದೆ. ಈ ಪ್ರಕೃತಿಯ ವಿಕೋಪದಿಂದಾಗಿ ಇಲ್ಲಿನ ಅಮೂಲ್ಯವಾದ ಗಿಡಮೂಲಿಕೆಗಳು ಹಾಗೂ ವೈವಿಧ್ಯಮಯ ಸಸ್ಯರಾಶಿ ಅಗ್ನಿಪಾಲಾಗಿದ್ದು, ಸ್ಥಳೀಯ ವನ್ಯಜೀವಿಗಳಿಗೂ ಸಾಕಷ್ಟು ಹಾನಿಯಾಗಿದೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ಹತೋಟಿಗೆ ತರಲು ಸತತವಾಗಿ ಶ್ರಮಿಸುತ್ತಿದೆ.

