ಬಾಗಲಕೋಟೆ: ಜನರ ಭಾವನೆಗಳ ವಿರುದ್ಧ ನಡೆದುಕೊಳ್ಳುತ್ತಿರುವ ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಆತಂಕ ಕಾಡುತ್ತಿದೆ. ಬಿಜೆಪಿ ಎದುರಿಸಲು ಎಲ್ಲ ಪಕ್ಷಗಳು ಒಂದಾಗಬೇಕಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆ ಸ್ಥಗಿತಗೊಳಿಸಲಾಗಿದೆ. ಬಿಜೆಪಿಗಿಂತ ದೊಡ್ಡದಾಗಿ ಬೆಳೆದರೆ ಬಿಜೆಪಿಯವರು ಸಹಿಸಲ್ಲ. ಬಿಜೆಪಿಯು ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರ ಗಳಿಸಿರಬಹುದು. ಆದರೆ, ಅದು ಶಾಶ್ವತವಲ್ಲ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನರ್ರಚನೆ ವಿಷಯಗಳನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷದಲ್ಲಿನ ಗೊಂದಲ ಸರಿ ಮಾಡಬೇಕು ಎನ್ನುವುದಷ್ಟೇ ನಮ್ಮ ಮನವಿ’ ಎಂದರು.
ನೀವು ಮುಖ್ಯಮಂತ್ರಿಯಾಗುತ್ತೀರಾ? ಪಕ್ಷದ ಅಧ್ಯಕ್ಷರಾಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಯಾರು ಮುಖ್ಯಮಂತ್ರಿ ಆಗಬೇಕು. ಯಾರು ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಮ್ಮ ಕೈಯಲ್ಲಿ ಏನೂ ಇಲ್ಲ’ ಎಂದರು.
‘ಮುಖ್ಯಮಂತ್ರಿ ಆಗುವಂತೆ ಅಭಿಮಾನಿಗಳು ಹೇಳುತ್ತಾರೆ. ಅವರವರ ಅಭಿಮಾನಿಗಳು ಅವರ ನಾಯಕರ ಹೆಸರು ಹೇಳುತ್ತಾರೆ. ಅದನ್ನು ಪಕ್ಷ ತೀರ್ಮಾನಿಸುತ್ತದೆ. ಮುಖ್ಯಮಂತ್ರಿ ವಿಷಯ ಚರ್ಚೆ ಕಾರಣಕ್ಕೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎನ್ನುವುದು ಸುಳ್ಳು. ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಯಾವುದೇ ಕಡತಗಳು ಬಾಕಿ ಉಳಿದಿಲ್ಲ’ ಎಂದರು.
ಪೆಟ್ರೋಲ್, ಡೀಸೆಲ್ಗೆ ರಾಜ್ಯ ಸರ್ಕಾರ ಸಬ್ಸಿಡಿ ನೀಡುವುದೇ ಎಂಬ ಪ್ರಶ್ನೆಗೆ, ‘ವಾರಕ್ಕೊಮ್ಮೆ ಬೆಲೆ ಹೆಚ್ಚಿಸಿದರೆ ಎಷ್ಟು ಸಬ್ಸಿಡಿ ಕೊಡಲು ಸಾಧ್ಯ? 70 ವರ್ಷಗಳಲ್ಲಿ ಇಂತಹ ಹಲವಾರು ಸಂಘರ್ಷಗಳು ನಡೆದಿವೆ. ಹಿಂದಿದ್ದವರೂ ನಿಭಾಯಿಸಿದ್ದಾರೆ. ಈಗಿನವರೂ ಸರಿಯಾಗಿ ನಿಭಾಯಿಸಬೇಕು. ನಿಭಾಯಿಸದ್ದಕ್ಕೆ ಸಮಸ್ಯೆಯಾಗಿದೆ’ ಎಂದರು.

