ಢಾಕಾ: ದುರ್ಗಾ ಪೂಜೆಯಂದು ಸಾರ್ವತ್ರಿಕ ರಜೆ ನೀಡಬಾರದು ಮತ್ತು ದುರ್ಗಾ ಮಾತೆಯ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಬಾರದು ಎಂದು ಬಾಂಗ್ಲಾದಲ್ಲಿ ಹಿಂದೂಗಳಿಗೆ ಮುಸ್ಲಿಂ ಸಂಘಟನೆ ಬಹಿರಂಗ ಎಚ್ಚರಿಕೆ ನೀಡಿದೆ.
ಇನ್ಸಾಫ್ ಕೀಮ್ಕರಿ ಛತ್ರ-ಜನತಾ ಹೆಸರಿನ ಮುಸ್ಲಿಂ ಮೂಲಭೂತವಾಗಿ ಸಂಘಟನೆ ಢಾಕಾದಲ್ಲಿ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದೆ. ರಸ್ತೆಗಳನ್ನು ಮುಚ್ಚುವ ಮೂಲಕ ಎಲ್ಲಿಯೂ ಪೂಜೆ ಮಾಡಬಾರದು. ವಿಗ್ರಹ ವಿಸರ್ಜನೆ ಮಾಡಿದರೆ ನೀರು ಮಲೀನವಾಗುತ್ತದೆ. ಹೀಗಾಗಿ ಯಾರೂ ದುರ್ಗಾ ಪೂಜೆಯನ್ನ ಆಚರಿಸಬಾರದು ಎಂದು ಎಚ್ಚರಿಕೆ ನೀಡಿದೆ.
ಹಿಂದೂಗಳು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ರಸ್ತೆಗಳನ್ನು ಮುಚ್ಚಬಾರದು. ಹಿಂದೂಗಳು ಆಟದ ಮೈದಾನದಲ್ಲಿ ದುರ್ಗಾ ಪೂಜೆ ಮಾಡಬಾರದು. ಬಾಂಗ್ಲಾದ ವಿಶೇಷ ಭೂಮಿಯಲ್ಲಿ ನಿರ್ಮಾಣವಾಗಿರುವ ದೇವಸ್ಥಾನಗಳು ಅಕ್ರಮ. ಇವುಗಳನ್ನು ಕೆಡವಬೇಕು ಎಂದು ಆಗ್ರಹಿಸಿದೆ.
ಭಾರತವು ಬಾಂಗ್ಲಾದೇಶದ ರಾಷ್ಟ್ರೀಯ ಶತ್ರುವಾಗಿರುವುದರಿಂದ ಬಾಂಗ್ಲಾದೇಶದ ಹಿಂದೂ ನಾಗರಿಕರೂ ಭಾರತ ವಿರೋಧಿಯಾಗಲು ಒಪ್ಪಿಕೊಳ್ಳಬೇಕು. ಹೀಗಾಗಿ ಭಾರತ ವಿರೋಧಿ ಬ್ಯಾನರ್ ಮತ್ತು ಭಾರತ ವಿರೋಧಿ ಘೋಷಣೆಗಳನ್ನು ದೇವಸ್ಥಾನಗಳಲ್ಲಿ ಅಳವಡಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.