ಢಾಕಾ: ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಹಲವು ದಿನಗಳ ಹಿಂದೆ ನಡೆದ ಹಿಂಸಾಚಾರದಲ್ಲಿ ನೂರಾರು ಜನ ಮೃತಪಟ್ಟ ಬೆನ್ನಲ್ಲೇ ಮತ್ತೊಂದು ಹಿಂಸಾಚಾರ ಭುಗಿಲೆದ್ದಿದೆ. ದೇಶದ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಭಾನುವಾರ (ಆಗಸ್ಟ್ 4) ನಡೆಸಿದ ಪ್ರತಿಭಟನೆಯು ಹಿಂಸಾರೂಪ ತಾಳಿದ್ದು, 32 ಜನ ಮೃತಪಟ್ಟಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯ ವೇಳೆ ನೂರಾರು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ದೇಶದ ರಾಜಧಾನಿ ಢಾಕಾ ಸೇರಿ 13 ಜಿಲ್ಲೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಸಲಾಗುತ್ತಿದೆ. ಗುಂಪುಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು, ಲಾಠಿ ಚಾರ್ಜ್ ಮಾಡಿದ್ದಾರೆ. ಇಷ್ಟಾದರೂ ಪ್ರತಿಭಟನೆಯು ಹಿಂಸಾರೂಪ ತಾಳಿದೆ. ಸರ್ಕಾರಿ ಕಚೇರಿಗಳ ಮೇಲೆ ದಾಳಿ, ಸರ್ಕಾರಿ ಆಸ್ತಿ-ಪಾಸ್ತಿ ಧ್ವಂಸ, ಪೊಲೀಸರು ಹಾಗೂ ಯೋಧರ ಮೇಲೆಯೇ ಕಲ್ಲುತೂರಾಟ ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ ನಡೆದಿದೆ. ಇನ್ನು, ಪೊಲೀಸರ ಗುಂಡಿಗೆ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.