ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಾನುವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಪ್ರಾಂತ್ಯದ ಬರ್ಖಾನ್ ಜಿಲ್ಲೆಯ ಜನನಿಬಿಡ ಮಾರುಕಟ್ಟೆಯಾದ ರುಕ್ನಿ ಬಜಾರ್ ನಲ್ಲಿ ಸ್ಫೋಟ ಸಂಭವಿಸಿದೆ. ಮೋಟರ್ ಸೈಕಲ್ ನಲ್ಲಿ ಇರಿಸಲಾಗಿದ್ದ ಸ್ಫೋಟಕ ಸಾಧನವನ್ನು ರಿಮೋಟ್ ನಿಯಂತ್ರಿತ ಸಾಧನದಿಂದ ಸ್ಫೋಟಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಪೊಲೀಸರು, ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಶವಗಳನ್ನು ಮತ್ತು ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿವೆ. ಈ ಪ್ರದೇಶವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಆಸ್ಪತ್ರೆಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮಾರಣಾಂತಿಕ ದಾಳಿಯ ಹೊಣೆಯನ್ನು ಇನ್ನೂ ಯಾವುದೇ ಗುಂಪು ಹೊತ್ತುಕೊಂಡಿಲ್ಲ.
ಇದಕ್ಕೂ ಮುನ್ನ ಶನಿವಾರ ಸಂಜೆ ಬಲೂಚಿಸ್ತಾನದ ಖುಜ್ದಾರ್ ಜಿಲ್ಲೆಯಲ್ಲಿ ಅಪರಿಚಿತ ಭಯೋತ್ಪಾದಕರು ಪೊಲೀಸ್ ವಾಹನದ ಮೇಲೆ ರಸ್ತೆಬದಿಯ ಬಾಂಬ್ ನಿಂದ ದಾಳಿ ನಡೆಸಿದ್ದು, ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.