ಅಬುಜಾ: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟಗೊಂಡ ಪರಿಣಾಮ 70 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರ ನೈಜೀರಿಯಾದ ಕಡುನಾ ನಗರದ ಡಿಕ್ಕೊ ಜಂಕ್ಷನ್‌ನಲ್ಲಿ ನಡೆದಿದೆ.
ಶನಿವಾರ ಈ ಘಟನೆ ಸಂಭವಿಸಿದ್ದು, 60,000 ಲೀಟರ್ ಪೆಟ್ರೋಲ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಸ್ಫೋಟಗೊಂಡಿದೆ. ಟ್ರಕ್ ಪಲ್ಟಿಯಾದಾಗ ಚೆಲ್ಲಿದ್ದ ಪೆಟ್ರೋಲ್‌ನ್ನು ತುಂಬಿಕೊಳ್ಳಲು ಹೋಗಿದ್ದವರ ಪೈಕಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ.
ಜೊತೆಗೆ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿವೆ ಎಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿಳಿಸಿದೆ. ಈ ಕುರಿತು ನೈಜರ್ ರಾಜ್ಯದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಮುಖ್ಯಸ್ಥ ಕುಮಾರ್ ತ್ಸುಕ್ವಾಮ್ ಮಾತನಾಡಿ, ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನೈಜೇರಿಯಾ ರಾಜಧಾನಿ ಅಬುಜಾವನ್ನು ಕಡುನಾಗೆ ಸಂಪರ್ಕಿಸುವ ರಸ್ತೆಯ ಡಿಕ್ಕೊ ಜಂಕ್ಷನ್‌ನಲ್ಲಿ ಈ ಅವಘಡ ಸಂಭವಿಸಿದ್ದು, ಇಲ್ಲಿಯವರೆಗೆ ಸಾವಿನ ಸಂಖ್ಯೆ 70ಕ್ಕೆ ಏರಿದೆ ಎಂದು ತಿಳಿಸಿದರು.
ನೈಜೀರಿಯಾದಲ್ಲಿ ಕಳೆದ 18 ತಿಂಗಳಲ್ಲಿ ಪೆಟ್ರೋಲ್ ಬೆಲೆ ಐದು ಪಟ್ಟು ಹೆಚ್ಚಾಗಿದೆ. ಹೀಗಾಗಿ ಟ್ರಕ್ ಪಲ್ಟಿಯಾದ ಸಮಯದಲ್ಲಿ ಪೆಟ್ರೋಲ್ ತೆಗೆದುಕೊಳ್ಳಲು ಹೋದವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ ಎಂದು ಹೇಳಿದರು.