ಫ್ರಾನ್ಸ್: ಹೆಚ್ಚಿನ ಪಾಲಕರು ತಮ್ಮ ಆಸ್ತಿಪಾಸ್ತಿಯನ್ನು ಇಳಿವಯಸ್ಸಿನಲ್ಲಿ ಮಕ್ಕಳಿಗೆ, ಸಂಬಂಧಿಕರಿಗೆ ಬರೆದಿಟ್ಟು ಹೋಗಬಹುದು. ಆದರೆ, ಫ್ರಾನ್ಸ್ ದೇಶದ ಶ್ರೀಮಂತ ನಿಕೋಲಾಸ್ ಪ್ಯೂಕ್ ಅವರು ತಮ್ಮೆಲ್ಲಾ ಸಂಪತ್ತನ್ನು ತೋಟದ ಹಮಾಲಿಗೆ ಬರೆದಿಡಲು ನಿರ್ಧರಿಸಿದ್ದಾರೆ. ನಿಕೋಲಾಸ್ ಪ್ಯೂಕ್ ಅವರು ಫ್ಯಾಷನ್ ವಸ್ತುಗಳ ದೈತ್ಯ ಕಂಪನಿ ಹೆರ್ಮೆಸ್ನ ಮುಖ್ಯಸ್ಥ ಸುಮಾರು 84,000 ಕೋಟಿ ರೂನಷ್ಟು ಆಸ್ತಿಯ ಒಡೆಯರಾಗಿದ್ದಾರೆ. ಇದರಲ್ಲಿ ಬಹುಭಾಗದ ಆಸ್ತಿಯನ್ನು 51 ವರ್ಷದ ಹಮಾಲಿಗೆ ವರ್ಗಾಯಿಸಲಿದ್ದಾರೆ. ಈ ನಿಟ್ಟಿನಲ್ಲಿ ಆ ವ್ಯಕ್ತಿಯನ್ನು ದತ್ತಕಕ್ಕೆ ಪಡೆದುಕೊಂಡು ಕಾನೂನು ಪ್ರಕಾರ ಮುಂದುವರಿಯುತ್ತಿದ್ದಾರೆ.
ನಿಕೋಲಾಸ್ ಪ್ಯೂಕ್ ಅವರಿಗೆ ಮದುವೆ ಆಗಿಲ್ಲ, ಮಗು ಇಲ್ಲ. 220 ಬಿಲಿಯನ್ ಡಾಲರ್ ಮೌಲ್ಯದ ಹರ್ಮೆಸ್ ಸಂಸ್ಥೆಯಲ್ಲಿ ಪ್ಯೂಕ್ ಅವರು ಶೇ. 5ರಿಂದ 6ರಷ್ಟು ಪಾಲು ಹೊಂದಿರಬಹುದು. ಈ ಆಸ್ತಿಯನ್ನೇ ಪ್ಯೂಕ್ ಅವರು ಧಾರೆ ಎರೆಯಹೊರಟಿರುವುದು. ಆದರೆ, ಆ ವಾರಸುದಾರನಾಗಲಿರುವ ಹಮಾಲಿ ಯಾರು ಎಂಬುದು ಮಾತ್ರ ಬಹಿರಂಗವಾಗಿಲ್ಲ.