ಇಸ್ಲಾಮಾಬಾದ್: 1999ರಲ್ಲಿ ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ಭಾರತದ ಮೇಲೆ ಕಳ್ಳರ ರೀತಿ ದಾಳಿ ನಡೆಸಿ ಬಳಿಕ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ, ಇದೇ ಮೊದಲ ಬಾರಿಗೆ ಆ ಯುದ್ಧದಲ್ಲಿ ತನ್ನ ಸೇನೆ ಭಾಗಿಯಾಗಿದ್ದರ ಕುರಿತು ಬಹಿರಂಗವಾಗಿ ಒಪ್ಪಿಕೊಂಡಿದೆ.
ಪಾಕಿಸ್ತಾನ ಸೇನೆಯ ಅಂದಾಜು 4000 ಯೋಧರು ಹತರಾದ ಘಟನೆ ಕುರಿತು ಪಾಕ್ ಸರ್ಕಾರವಾಗಲೀ, ಸೇನೆಯಾಗಲೀ ಇದುವರೆಗೂ ಎಲ್ಲಿಯೂ ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಘಟನೆ ಹಿಂದೆ ಮುಜಾಹಿದೀನ್‌ಗಳು ಅಥವಾ ಸ್ವಾತಂತ್ರ್ಯ ಹೋರಾಟಗಾರರ ಪಾತ್ರವಿತ್ತು ಎಂದೇ ಹೇಳಿಕೊಂಡು ಬಂದಿತ್ತು. ಜೊತೆಗೆ ತನ್ನ ಸೇನೆ ಭಾಗಿಯಾಗಿದ್ದರ ಕುರಿತು ಎಲ್ಲಿಯೂ ಒಪ್ಪಿರಲಿಲ್ಲ.
ಆದರೆ ಶನಿವಾರ ಪಾಕ್ ಸೇನಾ ದಿನದ ಅಂಗವಾಗಿ ರಾವಲ್ಪಿಂಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ.ಆಸಿಂ ಮುನೀರ್, ‘1965, 1971 ಅಥವಾ 1999ರ ಕಾರ್ಗಿಲ್ ಯುದ್ಧವಾಗಲಿ. ನಮ್ಮ ಸಾವಿರಾರು ಯೋಧರು ತಮ್ಮ ಜೀವವನ್ನು ಪಾಕಿಸ್ತಾನ ಮತ್ತು ಇಸ್ಲಾಂಗಾಗಿ ಬಲಿದಾನ ನೀಡಿದ್ದಾರೆ’ ಎಂದು ಹೇಳುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೇನೆ ಕೂಡಾ ಸಕ್ರಿಯವಾಗಿ ಭಾಗಿಯಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.