ಢಾಕಾ: ನಿರಂತರ ಪ್ರತಿಭಟನೆ, ಗಲಭೆಗಳ ಬಳಿಕ ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶವನ್ನು ತೊರೆದು ಪರಾರಿಯಾಗಿರುವ ನಂತರ, ದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರನ್ನು ನೇಮಕ ಮಾಡಲಾಗಿದೆ.
ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಧಾನಿಯಾಗಿ ನಡೆಸಿದ 15 ವರ್ಷಗಳ ಆಡಳಿತ ಸೋಮವಾರ ಕೊನೆಗೊಂಡಿದೆ. ಒಂದು ತಿಂಗಳ ಭಾರೀ ಪ್ರತಿಭಟನೆಯ ನಂತರ ಆಕೆ ದೇಶ ತೊರೆದಿದ್ದು, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ದೇಶದ ಸೇನೆಯು ಮಧ್ಯಂತರ ಸರ್ಕಾರವನ್ನು ರಚಿಸುವುದಾಗಿ ಘೋಷಿಸಿದೆ.
ಮಧ್ಯಂತರ ಸರಕಾರದ ಆಡಳಿತಕ್ಕೆ ದಾರಿ ಮಾಡಿಕೊಡಲು ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ಸಂಸತ್ತನ್ನು ವಿಸರ್ಜಿಸಿದರು. ಪ್ರಧಾನಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗಳ ನಡುವೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಒಂದು ದಿನದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಂಗಳವಾರ, ಬಾಂಗ್ಲಾದೇಶದ ವಿದ್ಯಾರ್ಥಿ ಮುಖಂಡರು ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರಿಗೆ ಉಸ್ತುವಾರಿ ಸರ್ಕಾರದ ನೇತೃತ್ವ ವಹಿಸುವಂತೆ ಕರೆ ನೀಡಿದರು. ಇದಕ್ಕೂ ಮುನ್ನ ದೇಶದ ಆಡಳಿತವನ್ನು ಸೈನ್ಯ ಸ್ವಾಧೀನಪಡಿಸಿಕೊಂಡಿದೆ. ಬಾಂಗ್ಲಾದೇಶದ ಮೊದಲ ಮಹಿಳಾ ನಾಯಕಿ ಖಲೀದಾ ಜಿಯಾ ಅವರನ್ನು ಮಂಗಳವಾರ ಗೃಹಬಂಧನದಿಂದ ಬಿಡುಗಡೆ ಮಾಡಲಾಗಿದೆ. ಬಾಂಗ್ಲಾದೇಶದ ಮೇಲಿನ ಪ್ರಾಬಲ್ಯಕ್ಕಾಗಿ ದೀರ್ಘಕಾಲದಿಂದ ನಡೆಯುತ್ತಿರುವ “ಬೇಗಮ್ಸ್ ಕದನ”ದಲ್ಲಿ ಇದು ಮತ್ತೊಂದು ಅಧ್ಯಾಯ ಎನ್ನಬಹುದು.
ರಕ್ಷಣಾ ಮುಖ್ಯಸ್ಥರು ಮತ್ತು ರಾಜಕೀಯ ಮುಖಂಡರೊಂದಿಗಿನ ಚರ್ಚೆಯ ನಂತರ, ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ಮುಖ್ಯಸ್ಥೆ ಖಲೀದಾ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ಕಚೇರಿ ಘೋಷಿಸಿತು. ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್, ಸಂಸತ್ತನ್ನು ವಿಸರ್ಜಿಸಿ ಶೀಘ್ರದಲ್ಲೇ ಮಧ್ಯಂತರ ಸರ್ಕಾರವನ್ನು ರಚಿಸುವುದಾಗಿ ಘೋಷಿಸಿದರು ಮತ್ತು ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದರು.